ಈ ವರ್ಷದ CUET UG 2026 ಫಲಿತಾಂಶಗಳು ಹೊರ ಬಂದಿದ್ದು, ದೆಹಲಿಯ ಮಾಜಿ ಸಚಿವ ಮತ್ತು ಪ್ರಸ್ತುತ ಬಿಜೆಪಿ ಶಾಸಕ ಕೈಲಾಶ್ ಗೆಹ್ಲೋಟ್ ಅವರ ಪುತ್ರಿ ದೇವಿನಾ ಗೆಹ್ಲೋಟ್ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
Sponsoredದೇವಿನಾ ಗೆಹ್ಲೋಟ್ ಒಟ್ಟು 1250 ಅಂಕಗಳಲ್ಲಿ 1232.19 ಅಂಕಗಳನ್ನು ಪಡೆದು ದೇಶದ ಟಾಪರ್ ಆಗಿದ್ದಾರೆ. ದೇವಿನಾ, ವಸಂತ್ ಕುಂಜ್ನ ದೆಹಲಿ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿನಿ. ಈ ಹಿಂದೆ 12ನೇ ತರಗತಿ ಪರೀಕ್ಷೆಯಲ್ಲಿ ಅವರು ಶೇ. 99.2 ಅಂಕಗಳನ್ನು ಗಳಿಸಿದ್ದರು. ಈಗ ಅವರು ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜ್ನಲ್ಲಿ ಹೆಚ್ಚಿನ ಅಧ್ಯಯನ ಮುಂದುವರಿಸುವ ಗುರಿ ಹೊಂದಿದ್ದಾರೆ.
ಫಲಿತಾಂಶ ಪ್ರಕಟವಾದ ನಂತರ ದೇವಿನಾ ಸಂತೋಷದಿಂದ ಇದ್ದಾರೆ. ‘ಇದು ನನ್ನ ಕನಸು ನನಸಾದಂತೆ. ಮೊದಲು ನನ್ನ ಮನಸ್ಸಿಗೆ ಬಂದದ್ದು ನನ್ನ ಹೆತ್ತವರೇ. ಅವರು ಯಾವಾಗಲೂ ನನ್ನನ್ನು ನಂಬಿದ್ದಾರೆ, ಕಷ್ಟದ ಸಮಯದಲ್ಲಿ ಬೆಂಬಲಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ. ಈ ಯಶಸ್ಸು ತನ್ನದ್ದು ಮಾತ್ರವಲ್ಲ, ಕುಟುಂಬದ್ದೂ ಕೂಡ ಎಂದು ಹೇಳಿದ್ದಾರೆ.
ಇನ್ನೂ ಈ ವರ್ಷ CUET UG ಪರೀಕ್ಷೆಗೆ 15.68 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 11.64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.




