ಚಿಕ್ಕಬಳ್ಳಾಪುರದ ತಾಲ್ಲೂಕಿನ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಕೊಠಡಿಯಲ್ಲಿ ಯುವತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿ ಜತೆಯಲ್ಲಿದ್ದ ಯುವಕ ಕೂಡ ಅಸ್ವಸ್ಥನಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಹಲವು ರೀತಿ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಗೆ ‘ಲವ್ ಜಿಹಾದ್’ ಎಂದು ಮೃತಳ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಮೂಲದ ಸಾಯಿ ಸುರಭಿ (ಮೃತ ಯುವತಿ) ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿಯಾದ ಕ್ಯಾಬ್ ಚಾಲಕ ಸಂಜಿತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಮ್ಸ್ಟೇಗೆ ಬಂದು ರೂಮ್ ಪಡೆದುಕೊಂಡಿದ್ದರು. ಸೋಮವಾರ ಚೆಕ್-ಔಟ್ ಸಮಯ ಮುಗಿದರೂ ರೂಮ್ನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ಒಳಹೋದಾಗ ಸುರಭಿ ಶವವಾಗಿ ಪತ್ತೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಸಂಜಿತ್ ಅಲಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾಯಿ ಸುರಭಿ ಚಿಕ್ಕಬಳ್ಳಾಪುರ ಮುದ್ದೇನಹಳ್ಳಿ ಮಧುಸೂದನ ಸಾಯಿ ವೈದ್ಯಕೀಯ ಕಾಲೇಜಿನಲ್ಲಿ ಈಚೆಗೆ ಕೆಲಸಕ್ಕೆ ಸೇರಿದ್ದರು. ‘ಕೇರಳಂ ಮೂಲದ ಕ್ಯಾಬ್ ಚಾಲಕ ಸಂಜೀತ್ ಅಲಿ ನನ್ನ ಮಗಳನ್ನು ಪ್ರೀತಿ ಹೆಸರಲ್ಲಿ ನಂಬಿಸಿದ್ದ. ಮಾದಕ ವಸ್ತುಗಳ ವ್ಯಸನಕ್ಕೂ ದೂಡಿದ್ದ. ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಹಿಂದೆ ಆತನ ವಿರುದ್ಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ಸಹ ನೀಡಿದ್ದೆವು. ಆರು ತಿಂಗಳ ಹಿಂದೆ ಮಗಳು ನಾಪತ್ತೆ ಆಗಿದ್ದಳು. ಆಗಲೂ ಪ್ರಕರಣ ದಾಖಲಿಸಿದ್ದೆವು. ಮಗಳಿಗೆ ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಈಚೆಗೆ ಮುದ್ದೇನಹಳ್ಳಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಸಂಜೀತ್ ಅಲಿ ಮತ್ತೆ ಅಲ್ಲಿಗೂ ಹೋಗಿ ತಲೆ ಕೆಡಿಸಿದ್ದಾನೆ. ಇದೊಂದು ಲವ್ ಜಿಹಾದ್. ಅವನೇ ಹತ್ಯೆ ಮಾಡಿದ್ದಾನೆ” ಎಂದು ಸುರಭಿ ತಾಯಿ ಗೀತಾ ಕಣ್ಣೀರು ಹಾಕಿದ್ದಾರೆ.
ರೂಮ್ನಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿರುವುದರಿಂದ ವಿಷ ಸೇವಿಸಿರುವ ಸಾಧ್ಯತೆಗಳ ಬಗ್ಗೆಯೂ ಎಫ್ಎಸ್ಎಲ್ (FSL) ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ ರೂಮ್ನಲ್ಲಿ ಒಂದು ರಹಸ್ಯ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಇವರಿಬ್ಬರ ಸಂಬಂಧ ಹಾಗೂ ಸಾವಿಗೆ ಕಾರಣವಾಗಬಹುದಾದ ಹಲವು ಆಘಾತಕಾರಿ ವಿಚಾರಗಳನ್ನು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


