ಚಿಲ್ಲರೆ ಗಲಾಟೆ; ಬಸ್‌ನಿಂದ ತಳ್ಳಲ್ಪಟ್ಟ ಮಹಿಳಾ ಕಂಡಕ್ಟರ್ 10 ದಿನಗಳ ಬಳಿಕ ಸಾವು
ಚಿಲ್ಲರೆ ಹಣದ ವಿಚಾರವಾಗಿ ನಡೆದ ವಾಗ್ವಾದದಿಂದಾಗಿ ಚಲಿಸುತ್ತಿದ್ದ ಬಸ್ಸಿನಿಂದ ತಳ್ಳಲ್ಪಟ್ಟು, ಕಾಲುಗಳ ಮೇಲೆ ಬಸ್‌ನ ಹಿಂಭಾಗದ ಚಕ್ರಗಳು ಹರಿದು ತೀವ್ರಗಾಯಗೊಂಡಿದ್ದ ಮಹಿಳಾ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ನ.3 ರಂದು ಸಾವಿಗೀಡಾಗಿದ್ದಾರೆ.
Sponsoredಈ ದಾರುಣ ಘಟನೆಯು ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಅಶ್ವಪುರಂ ಮಂಡಲ ವ್ಯಾಪ್ತಿಯಲ್ಲಿ ನಡೆಯಿತು. ಮೃತಪಟ್ಟ ದುರ್ದೈವಿ ಮಹಿಳಾ ಕಂಡಕ್ಟರ್ ರವರ ಹೆಸರು ಗುಂಡ್ಲಾ ಪ್ರವಳ್ಳಿಕಾ (24ವ). ಇವರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅಂದು ಬಸ್ಸಿನಲ್ಲಿ ನಡೆದಿದ್ದೇನು?
ಅಸ್ವಪುರಂ ಮಂಡಲದ ಮಿತ್ತಗೂಡೆಮ್ ಬಳಿ ಈ ದುರಂತ ನಡೆದಿತ್ತು. ತನ್ನ ಮಗನ ಜೊತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಟಿಕೆಟ್ ನೀಡುವಾಗ ಘಟನೆ ಆರಂಭವಾಯಿತು. 10ರೂ. ಟಿಕೆಟ್‌ಗೆ ರೂ.100 ನೋಟು ನೀಡಿದ ಮಹಿಳೆ, ಆಗ ಕಂಡಕ್ಟರ್ ಪ್ರವಳಿಕಾ ಬಳಿ ಚಿಲ್ಲರೆ ಹಣ ಇಲ್ಲದ ಕಾರಣ ಬಾಕಿ 90 ರೂ. ಟಿಕೆಟನ್ನು ಹಿಂಭಾಗದಲ್ಲಿ ಬರೆದುಕೊಟ್ಟು, ಇಳಿಯುವಾಗ ಪಡೆಯಲು ತಿಳಿದ್ದರು. ಆದರೆ, ಮಹಿಳೆ ತನ್ನ ನಿಲ್ದಾಣ ಹತ್ತಿರವಾಗುತ್ತಿದ್ದಂತೆ ಕೂಡಲೇ ಹಣ ಬಾಕಿ ನೀಡಲು ಪಟ್ಟು ಹಿಡಿದು ಗಲಾಟೆ ಆರಂಭಿಸಿದರು. ಮಾತಿಗೆ ಮಾತು ಬೆಳೆದು ಕೋಪಗೊಂಡ ಮಹಿಳೆ ಚಲಿಸುತ್ತಿದ್ದ ಬಸ್‌ನ ಬಾಗಿಲಿನಿಂದ ಪ್ರವಳಿಕಾರನ್ನು ಹೊರಗೆ ತಳ್ಳಿದ್ದು, ಪರಿಣಾಮ ಕಾಲುಗಳ ಮೇಲೆ ಬಸ್‌ನ ಹಿಂಭಾಗದ ಚಕ್ರಗಳು ಹರಿದಿದೆ.
ಬಸ್ಸಿನಿಂದ ಕೆಳಗೆ ಬಿದ್ದ ಪ್ರವಳ್ಳಿಕಾ ಅವರ ಕಾಲುಗಳ ಮೇಲೆ ಬಸ್ಸಿನ ಹಿಂದಿನ ಚಕ್ರ ಹರಿದುಹೋಗಿ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸುಮಾರು 10 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಅವರು ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 3 ರಂದು ಸಾವನ್ನಪ್ಪಿದರು.
ಈ ಕೃತ್ಯ ಎವೆಗಿಸಿದ ಆರೋಪಿ ಮಹಿಳೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ತಾಯಿಗೆ ಸರಕಾರಿ ಉದ್ಯೋಗ ಹಾಗೂ ಇಂದಿರಮ್ಮ ಯೋಜನೆಯಡಿ ಮನೆ ನೀಡುವುದಾಗಿ ಬುಧವಾರ ಪ್ರಕಟ ಮಾಡಿದ್ದಾರೆ.




