ಕನ್ನಡ ಚಿತ್ರ ಲೋಕದಲ್ಲಿ ಸೆಲೆಬ್ರಿಟಿಗಳ ಫ್ಯಾಶನ್ ಡಿಸೈನರ್ ಎಂದೇ ಖ್ಯಾತಿ ಪಡೆದಿದ್ದ ಹಾಗೂ ಮಲ್ಲಮ್ಮ ಎಂಬ ಸಾಧಾರಣ ಹಳ್ಳಿಯ ಮಹಿಳೆಯನ್ನು ಫೇಮಸ್ ಮಾಡಿಸಿ, ಅವರು ಬಿಗ್ ಬಾಸ್ ಮನೆಗೆ ಹೋಗಲು ಕಾರಣಕರ್ತರಾಗಿದ್ದ, ಕನ್ನಡ ನಾಡಿನ ಜನತೆಯ ಮನೆಗೆದ್ದಿದ್ದ ಪಲ್ಲವಿ ಅವರು ಇತ್ತೀಚಿಗಷ್ಟೇ ನಿಧನ ಹೊಂದಿದ್ದರು. ಇದೀಗ ಅವರ ಸಾವಿನ ಕಾರಣ ಬಹಿರಂಗವಾಗಿದೆ.
ಪಲ್ಲವಿಯವರ ಸಾವಿನ ಸುದ್ದಿ ಕನ್ನಡ ಚಿತ್ರರಂಗದಲ್ಲಿಯೇ ಬರಸಿಡಿಲಿನಂತೆ ಬಂದೊದಗಿತ್ತು. ಅವರು ಸಾವನ್ನಪ್ಪಿದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಕುಟುಂಬ ಕೂಡ ಇದನ್ನು ಅಧಿಕೃತವಾಗಿ ತಿಳಿಸಿತ್ತು. ಆದರೆ ಅವರ ಸಾವಿನ ಕಾರಣ ಏನು ಎಂದು ತಿಳಿದಿರಲಿಲ್ಲ. ಇದೀಗ ಮಲ್ಲಮ್ಮ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂದು ಅಲ್ಲಿ ಏನೆಲ್ಲ ನಡೆಯಿತು ಅನ್ನುವುದನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ.
ಮಲ್ಲಮ್ಮ ಹೇಳಿದ್ದೇನು?
ಮಲ್ಲಮ್ಮ ಮಾಧ್ಯಮದವರ ಮುಂದೆ ಗೋಳೋ ಎಂದು ಅತ್ತಿದ್ದಾರೆ. ʼನಮ್ಮ ಮೇಡಂ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಮೂರು ದಿನ ಆಯ್ತು. ಮೊದಲೆಲ್ಲ ಆರೋಗ್ಯದಿಂದಲೇ ಇದ್ದರು. ನಮ್ಮ ಜೊತೆಗೆ ಚೆನ್ನಾಗಿಯೇ ಮಾತಾಡ್ತಿದ್ರು. ಆಸ್ಪತ್ರೆಗೆ ಸೇರುವ ದಿನವೂ ಆಫೀಸಿಗೆ ಬಂದಿದ್ದರು. ಮದುವೆ ಫಂಕ್ಷನ್‌ಗಳ ಬಟ್ಟೆಗಳ ಆರ್ಡರ್ ಕೂಡ ತೆಗೆದುಕೊಂಡಿದ್ದರು.ʼ ಎಂದಿದ್ದಾರೆ.
ಇದ್ದಕ್ಕಿದ್ದ ಹಾಗೆ ಮಧ್ಯಾಹ್ನದ ಬಳಿಕ ಚಳಿಜ್ವರ ಶುರುವಾಗಿದೆ. ಮೈ ಎಲ್ಲ ನಡುಗಲು ಶುರುವಾಗಿದೆ. ಆಗ ಮಲ್ಲಮ್ಮನ ಜೊತೆಗೆ ಪಲ್ಲವಿ ಅವರು ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರಿಸ್ಥಿತಿಯ ಗಂಭೀರತೆ ಅರಿತ ವೈದ್ಯರು ದೊಡ್ಡಾಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರಂತೆ. ಅದರಂತೆ ಅಪೊಲೋ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಗೆ ಹೋದಮೇಲೆ ಕೊಂಚ ಚೇತರಿಕೆ ಕಂಡುಬಂದಿದ್ದು ಮಲ್ಲಮ್ಮ ಅವರನ್ನು ಮನೆಗೆ ಕಳಿಸಿದ್ದಾರೆ. ಜೊತೆಗೆ ತನ್ನ ಬೊಟಿಕ್‌ನಲ್ಲಿದ್ದವರಿಗೂ ಕಾಲ್ ಮಾಡಿ ಕೆಲಸದ ಪ್ರಗತಿಯ ಬಗ್ಗೆ ವಿಚಾರಿಸಿದ್ದಾರೆ. ಇದನ್ನೆಲ್ಲ ನೋಡಿ ಪಲ್ಲವಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಶನಿವಾರ ಅಸ್ವಸ್ಥತೆ ಉಲ್ಬಣಗೊಂಡು ಅವರು ಅಸುನೀಗಿದ್ದಾರೆ. ಅವರಿಗೆ ಸೀರಿಯಸ್ ಆಗಿದೆ ಅನ್ನುವ ಸುದ್ದಿ ಕೇಳಿ ಆಸ್ಪತ್ರೆಗೆ ಹೋದ ಮಲ್ಲಮ್ಮ ಹಾಗೂ ಬೊಟಿಕ್‌ನಲ್ಲಿನ ಮಂದಿಗೆ ಪಲ್ಲವಿ ಅವರು ಇನ್ನಿಲ್ಲ ಅನ್ನುವ ಸುದ್ದಿ ಕೇಳಿ ಶಾಕ್ ಆಗಿದೆ.


