ಶನಿವಾರ, 24 ಅಕ್ಟೋಬರ್ 2026

45 ಲಕ್ಷ ಖರ್ಚು ಮಾಡಿ, 116 ಗ್ರಾಂ ಚಿನ್ನ ಹಾಕಿದ್ರೂ ವರದಕ್ಷಿಣೆ ಕಿರುಕುಳ – 24ರ ಯುವತಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಇತ್ತೀಚೆಗೆ ಪುಣೆಯಲ್ಲಿ ನಡೆದಿರುವುದು ವರದಿಯಾಗಿದೆ.

ಐಐಟಿ ಇಂಜಿನಿಯರ್‌ ಆಗಿದ್ದ 24ರ ಹರೆಯದ ವೈಷ್ಣವಿ ಓಂಕಾರ್ ಗಿಸ್ರೆ ಆತ್ಮಹತ್ಯೆಗೆ ಶರಣಾದ ಮಹಿಳೆ. ವರದಕ್ಷಿಣೆ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ವೈಷ್ಣವಿ ಅವರನ್ನು ಈ ವರ್ಷದ ಮೇ 9 ರಂದು 28 ವರ್ಷದ ಓಂಕಾರ್ ಸಂಜಯ್ ಗಿಸ್ರೆ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮದುವೆಗಾಗಿ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಲ್ಲದೆ, ಉಡುಗೊರೆಯಾಗಿ 116.64 ಗ್ರಾಂ ಚಿನ್ನವನ್ನು ನೀಡಿದ್ದಾಗಿ ಮೃತಳ ಕುಟುಂಬಸ್ಥರು ಹೇಳಿದ್ದಾರೆ.

ಮದುವೆಗೆ ಸಾಕಷ್ಟು ಖರ್ಚು ಮಾಡಿದ ಬಳಿಕವೂ ಪತಿ ಹಾಗೂ ಆತನ ಮನೆಯವರು ಕಾರು ಖರೀದಿಗೆ 5 ಲಕ್ಷ ರೂಪಾಯಿ ನೀಡಬೇಕೆಂದು ಮಾನಸಿಕ ಹಾಗೂ ದೈಹಿಕವಾಗಿ ವೈಷ್ಣವಿ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದಿದ್ದ ವೈಷ್ಣವಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮಗಳ ಸಾವಿನ ಬಳಿಕ ತಂದೆ ಪ್ರವೀಣ್ ರಘುನಾಥ್ ಜರಂಡೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ, ಪೊಲೀಸರು ಆಕೆಯ ಪತಿ, ಮಾವ ಸಂಜಯ್ ಮಹಾದೇವ್ ಗಿಸ್ರೆ (49) ಮತ್ತು ಅತ್ತೆ ರೂಪಾಲಿ ಸಂಜಯ್ ಗಿಸ್ರೆ (42) ಅವರ ವಿರುದ್ಧ ಪ್ರಕರಣ ದಾಖಲಾಗಿದೆ.