ಶನಿವಾರ, 24 ಅಕ್ಟೋಬರ್ 2026

ಅಕ್ಕ ಭಾವನಾ ಜೊತೆ ಲಾವಣ್ಯ ಕೊನೆಯದಾಗಿ ಮಾತಾಡಿದ್ದೇನು ? ಸತ್ಯ ಬಿಚ್ಚಿಟ್ಟ ಭಾವ ಗೌತಮ್

ಬಿಸಿ ರೋಡ್​ನಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. 4 ವರ್ಷದ ಹಿಂದೆಯೇ ಬ್ರೇಕಪ್  ಆಗಿದ್ದರೂ ಕೂಡಾ ಚೇತನ್, ಲಾವಣ್ಯ ಜೊತೆ ಜಗಳ ಮಾಡಿದ್ದು ಇಬ್ಬರೂ ಒಂದೇ ಬಸ್​​ನಲ್ಲಿ ಬಂದಿದ್ದರು ಎನ್ನಲಾಗಿದೆ. ಇದೀಗ ಲಾವಣ್ಯ ಕೊನೆಯಾದಾಗಿ ಮಾತನಾಡಿದ್ದು ಅವರ ಅಕ್ಕ ಭಾವನಾ ಜೊತೆ ಎನ್ನಲಾಗಿದ್ದು, ಭಾವ ಗೌತಮ್ ಅವರು ಪೋಲಿಸರಿಗೆ ಹೇಳಿಕೆ ನೀಡಿದ್ದಾರೆ.

ಭಾವ ಗೌತಮ್ ಕಾಲ್ ನಲ್ಲಿದ್ದಾಗಲೇ ಚೇತನ್ ಲಾವಣ್ಯಳ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಲಾವಣ್ಯಳ ಅಕ್ಕನ ಗಂಡ ಗೌತಮ್ ಕೊನೆ ಕ್ಷಣದ ಮಾತುಕತೆ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಗೌತಮ್, ನಾಲ್ಕು ವರ್ಷದ ಹಿಂದೆ ಬ್ರೇಕಪ್ ಆಗಿದ್ದ ಬಗ್ಗೆ ಮಾಹಿತಿ ಇತ್ತು. ನಾನು ಮದುವೆಯಾಗಿ ಕೇವಲ ಒಂದು ವರ್ಷ ಆಗಿದೆ. ನಿನ್ನೆ ಸಂಜೆ ಲಾವಣ್ಯ ಬಸ್ ನಲ್ಲಿದ್ದಾಗ ಚೇತನ್ ಬಂದಿದ್ದಾನೆ. ಆಗ ಲಾವಣ್ಯ ನನ್ನ ಹೆಂಡತಿಗೆ ಕಾಲ್ ಮಾಡಿ ಚೇತನ್ ಕಿರಿಕಿರಿ ಮಾಡುತ್ತಿರುವ ಬಗ್ಗೆ ಹೇಳಿದ್ದಳು. ಆಗ ಹೆಂಡತಿ ನನಗೆ ಲಾವಣ್ಯಗೆ ಕಾಲ್ ಮಾಡೋಕೆ ಹೇಳಿದಳು. ನಾನು ಲಾವಣ್ಯಗೆ ಕಾಲ್ ಮಾಡಿದಾಗ ಚೇತನ್ ಹತ್ತಿರದಲ್ಲೇ ಇದ್ದ. ಚೇತನ್ ಗೆ ಮೊಬೈಲ್ ಕೊಡು ಅಂತಾ ಹೇಳಿದೆ. ಅಷ್ಟರಲ್ಲಾಗಲೇ ಕಿರುಚಾಟ ಕೇಳಿಸಿತು. ಹತ್ತೇ ಸೆಕೆಂಡ್ ನಲ್ಲಿ ಕೊಲೆ ಮಾಡಿದ್ದಾನೆ. ಚೇತನ್ ಗೆ ಪೊಲೀಸರು ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ.