ಶನಿವಾರ, 24 ಅಕ್ಟೋಬರ್ 2026

ವಿಟ್ಲ: ಬಸ್‌ ತಂಗುದಾಣದ ಬಳಿ ಅಕ್ರಮ ಮದ್ಯ ಮಾರಾಟ, ವ್ಯಕ್ತಿಯ ಬಂಧನ

Liquor Ban

ವಿಟ್ಲ: ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧನ ಮಾಡಿದ ಘಟನೆ ಜೂ.26 ರ ಶುಕ್ರವಾರ ರಾತ್ರಿ ಮಂಗಿಲಪದವು ಬಸ್‌ ತಂಗುದಾಣದ ಬಳಿ ನಡೆದಿದೆ.

ಬಂಧಿತ ಆರೋಪಿಯನ್ನು ವಿಟ್ಲ ಕಸಬಾ ನಿವಾಸಿ ಲಕ್ಷ್ಮಣ ಗೌಡ (54) ಎಂದು ಗುರುತಿಸಲಾಗಿದೆ.

ಮಂಗಿಲಪದವು ಬಸ್‌ ತಂಗುದಾಣದ ಬಳಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ವಿಟ್ಲ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಪ್ರಕಾಶ ದೇವಾಡಿಗ ಅವರಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ದಾಳಿ ಮಾಡಿದೆ.

ಈ ಸಂದರ್ಭದಲ್ಲಿ ತಂಗುದಾಣದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಲಕ್ಷ್ಮಣಗೌಡನನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ಅಕ್ರಮ ಮದ್ಯ ಮಾರಾಟದ ಕುರಿತು ತಿಳಿದು ಬಂದಿದೆ.

ವಿವಿಧ ಮಾದರಿಯ ಒಟ್ಟು 4.5 ಲೀ.ಮದ್ಯ, ಮದ್ಯ ಮಾರಾಟದಿಂದ ಸಂಗ್ರಹವಾಗಿದ್ದ 300 ರೂ., ವಶಪಡಿಸಲಾಗಿದೆ.

ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮದ್ಯವನ್ನು ಇಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾಣೆ. ಪೊಲೀಸರು ಆರೋಪಿ ಲಕ್ಷ್ಮಣಗೌಡನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.