Home » ಯುವಕನ ಜೊತೆ ವಿಡಿಯೋ ವೈರಲ್ – 22 ವರ್ಷದ ಯುವತಿಯನ್ನು ಕೊಂದ ತಂದೆ-ಮಗ!!

ಯುವಕನ ಜೊತೆ ವಿಡಿಯೋ ವೈರಲ್ – 22 ವರ್ಷದ ಯುವತಿಯನ್ನು ಕೊಂದ ತಂದೆ-ಮಗ!!

0 comments

ಬೇರೊಬ್ಬ ಯುವಕನ ಜೊತೆ ಇರುವ ವಿಡಿಯೋ ವೈರಲ್ ಆದ ಕಾರಣ 22 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೀವ್ರ ಆಘಾತ ಮೂಡಿಸಿದೆ.

ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸೋಫಿಯಾ (22) ಕೊಲೆಯಾದ ದುರ್ದೈವಿ. ಆಕೆಯ ತಂದೆ ಮೊಹಮ್ಮದ್ ಫಾರೂಕ್ ಮತ್ತು ಅಣ್ಣ ಮೊಹಮ್ಮದ್ ಹಾಬಿಲ್ (38) ಬಂಧಿತ ಆರೋಪಿಗಳು.

ಘಟನೆಯ ಹಿನ್ನೆಲೆ ಏನು?

ಸಂತ್ರಸ್ತೆ ಯುವತಿಯು ಯುವಕನೊಬ್ಬನೊಂದಿಗೆ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುಟುಂಬದ ಗಮನಕ್ಕೆ ಬಂದ ನಂತರ ಮನೆಯಲ್ಲಿ ತೀವ್ರ ಗಲಾಟೆ ನಡೆದಿದೆ. ವಿಡಿಯೋದಿಂದ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶಗೊಂಡ ತಂದೆ ಮತ್ತು ಸಹೋದರ ಸೇರಿ ಯುವತಿಯ ಮೇಲಿನ ಕೋಪದಲ್ಲಿ ಈ ಘೋರ ಕೃತ್ಯ ಎಸಗಿದ್ದಾರೆ.

ಯೋಜನೆಯಂತೆ ಆಗಸ್ಟ್ 12ರ ರಾತ್ರಿ ತಂದೆ ಫಾರೂಕ್ ಹಾಗೂ ಅಣ್ಣ ಹಾಬಿಲ್ ಇಬ್ಬರೂ ಸೋಫಿಯಾಳನ್ನು ಬೈಕ್‌ನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಹಾಬಿಲ್ ಮೊದಲೇ ತನ್ನ ಪ್ಯಾಂಟ್ ಒಳಗೆ ಕಬ್ಬಿಣದ ಸುತ್ತಿಗೆಯನ್ನು ಬಚ್ಚಿಟ್ಟುಕೊಂಡಿದ್ದ. ಘೇಲ್ಜಿಪುರ ಗ್ರಾಮದ ಸಮೀಪವಿರುವ ನಿರ್ಜನವಾದ ಕಚ್ಚಾ ರಸ್ತೆಗೆ ಬೈಕ್ ತಿರುಗಿಸಿದ ಹಾಬಿಲ್, ಬೈಕ್ ನಿಲ್ಲಿಸಿ ತಂಗಿಯ ತಲೆಗೆ ಸುತ್ತಿಗೆಯಿಂದ ಬಲವಾಗಿ ಮೂರು ಬಾರಿ ಹೊಡೆದಿದ್ದಾನೆ. 

ನಂತರ ಘೇಲ್ಜಿಪುರ ರಸ್ತೆ ಕ್ರಾಸ್ ಬಳಿ ಅತಿವೇಗವಾಗಿ ಬಂದ ವಾಹನವೊಂದು ನಮ್ಮ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರ ಮುಂದೆ ನಾಟಕವಾಡಿದ್ದ. ಈ ಅಪಘಾತದಲ್ಲಿ ತಂಗಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ತನಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಿಂಬಿಸಿದ್ದ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೋಫಿಯಾಳನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಆಕೆ ಸಾವನ್ನಪ್ಪಿದ್ದಳು.

ನಂತರ ಪೋಷಕರು ಪೊಲೀಸರಿಗೆ ಅಪಘಾತ ಎಂದು ದೂರು ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಬಯಲಾಗುತ್ತಿದ್ದಂತೆ ಪೊಲೀಸರು ತಂದೆ ಮೊಹಮ್ಮದ್ ಫಾರೂಕ್ ಮತ್ತು ಮಗ ಮೊಹಮ್ಮದ್ ಹಾಬಿಲ್‌ನನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಜೈಲಿಗಟ್ಟಿದ್ದಾರೆ.

You may also like