ಸೋಮವಾರ, 26 ಅಕ್ಟೋಬರ್ 2026
Trending

ತೃತೀಯ ಲಿಂಗಿ ಜೊತೆ ಮಂತ್ರಿ ಇರುವ ವಿಡಿಯೋ ವೈರಲ್‌, ಭಾರೀ ಚರ್ಚೆ

ಮುಂಬಯಿ: ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ನರಹರಿ ಜಿರ್ವಾಲ್‌ ಅವರದ್ದೆನ್ನಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಸಂಚಲನವನ್ನು ಉಂಟು ಮಾಡಿದೆ.

Sponsored

ಸರಕಾರಿ ನಿವಾಸದಲ್ಲಿ ತೃತೀಯ ಲಿಂಗಿಯೊಬ್ಬರ ಜೊತೆ ಸಚಿವರು ಇರುವ ದೃಶ್ಯಗಳು ಈ ವಿಡಿಯೋದಲ್ಲಿದೆ ಎನ್ನಲಾಗಿದೆ. ಸಚಿವರ ಖಾಸಗಿ ಕೊಠಡಿಯಲ್ಲಿ ಮದ್ಯಪಾನ ಸೇರಿ ಅನೇಕ ಕೃತ್ಯಗಳು ನಡೆದಿದೆ ಎನ್ನಲಾಗಿರುವ ದೃಶ್ಯಗಳು ಆಡಳಿತ ವಲಯದಲ್ಲಿ ಭಾರೀ ಚರ್ಚೆಯನ್ನುಂಟು ಮಾಡಿದ್ದು, ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದೆ.

Advertisement

ಮಾಧ್ಯಮ ವರದಿಯ ಪ್ರಕಾರ, ವಿಡಿಯೋದಲ್ಲಿ ತೃತೀಯ ಲಿಂಗಿ ಪವನ್‌ ಯಾದವ್‌ ಎಂದು ಗುರುತಿಸಲಾಗಿದೆ. ಆಕೆಯ ಸಹೋದರನೇ ಈ ವಿಡಿಯೋವನ್ನು ಬಹಿರಂಗಪಡಿಸಿದ್ದು, ಮುಂಬೈನ ಕುರಾರ್‌ ಪೊಲೀಸ್‌ ಠಾಣೆಯಲ್ಲಿ ಪವನ್‌ ಯಾದವ್‌ ವಿರುದ್ಧ ಈಗಾಗಲೇ ಸುಲಿಕೆ ಪ್ರಕರಣವೊಂದು ದಾಖಲಾಗಿದೆ. ಈ ವಿಡಿಯೋ ಸುಮಾರು 7 ತಿಂಗಳಷ್ಟು ಹಳೆಯದಾಗಿದ್ದು, ಇದೀಗ ಉದ್ದೇಶಪೂರ್ವಕವಾಗಿ ವೈರಲ್‌ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ವಿಡಿಯೋ ವೈರಲ್‌ ಬೆನ್ನಲ್ಲೇ ಕಾಂಗ್ರೆಸ್‌ ತೀವ್ರ ವಾಗ್ದಾಳಿ ಮಾಡಿದ್ದು, ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಹರ್ಷವರ್ಧನ್‌ ಸಪ್ಕಾಲ್‌ ಅವರು ಈ ಘಟನೆಯನ್ನು ಖಂಡನೆ ಮಾಡಿದ್ದು, “ಮುಖ್ಯಮಂತ್ರಿಗಳು ತಕ್ಷಣವೇ ಜಿರ್ವಾಲ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕುʼ ಎಂದು ಆಗ್ರಹ ಮಾಡಿದ್ದಾರೆ.

ವಿವಾದ ಹೆಚ್ಚಾಗುತ್ತಿದ್ದಂತೆ ಸಚಿವ ನರಹರಿ ಜರ್ವಾಲ್‌ ಅವರ ಎರಡೂ ಮೊಬೈಲ್‌ ಫೋನ್‌ಗಳು ಸ್ವಿಚ್‌ಆಫ್‌ ಆಗಿದ್ದು, ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ವೈರಲ್‌ ವಿಡಿಯೋ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವರ ಕಚೇರಿ ಸ್ಪಷ್ಟನೆ ನೀಡಿದೆ.