ಶನಿವಾರ, 24 ಅಕ್ಟೋಬರ್ 2026

ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಸ್ಥಾದಲ್ಲಿ ಮಹಿಳೆಯ ಹಣ ಕಳ್ಳತನ

image Credit; Public Tv

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ಹಣ ಕಳ್ಳತನ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಬಂಧಿತ ಆರೋಪಿಗಳು.

ನಿಮಿಶಾ ಎಂಬುವವರು ದೇವಸ್ಥಾನಕ್ಕೆ ಬಂದಿದ್ದು, ಇವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 80ಸಾವಿರ ರೂ. ಹಣ ಕಳ್ಳತನವಾಗಿತ್ತು. ಆದರೆ ದೇವಸ್ಥಾನದ ಆವರಣದಲ್ಲಿ ಎಷ್ಟೇ ಹುಡುಕಾಟ ಮಾಡಿದರೂ ಹಣ ಪತ್ತೆಯಾಗಿರಲಿಲ್ಲ.

ಅನಂತರ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲು ಮಾಡಿದ್ದರು. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ತೆಗೆದಿದ್ದ ಛಾಯಾಚಿತ್ರಗಳ ಆಧಾರದ ಮೇಲೆ ತನಿಖೆ ಮಾಡಿದರು.

ತನಿಖೆಯಲ್ಲಿ ಕಳ್ಳತನ ಕೃತ್ಯದ ಭಾಗಿಯಾಗಿದ್ದ ಮೂವರು ಮಹಿಳೆಯರು ಸುಳಿವು ದೊರಕಿತ್ತು.

ಬಂಧಿತ ದುರ್ಗಮ್ಮ ವಿರುದ್ಧ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿದ್ದರೆ, ಶಾರದಾ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದೆ. ಆರೋಪಿಗಳನ್ನು ಬಂಧನ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.