ಉಡುಪಿ: ಬಾಡಿಗೆ ಮನೆ ಅಡ್ವಾನ್ಸ್ ವಿಚಾರದಲ್ಲಿ ಕಿರಿಕ್: ಮಾಲಿಕನ ಮೇಲೆ ಆಸಿಡ್ ಹಾಕಿದ ಬಾಡಿಗೆದಾರ
ಉಡುಪಿ: ಬಾಡಿಗೆ ಮನೆಯ ಅಡ್ವಾನ್ಸ್ ಹಣದ ವಿಚಾರಕ್ಕೆ ಆರಂಭಗೊಂಡ ವಿವಾದವೊಂದು ಭೀಕರ ದಾಳಿಗೆ ತಿರುಗಿದೆ. ಹಣ ಹಿಂದಿರುಗಿಸುವ ವಿಚಾರದ ತಕರಾರಿನ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿದ ವ್ಯಕ್ತಿಯೋರ್ವ ಮಾಲಕನ ಮೇಲೆ ಆಸಿಡ್ ಎರಚಿರುವ ಘಟನೆ ಬುಧವಾರ ನಡೆದಿದೆ. ದಾಳಿಯಲ್ಲಿ ಇಂದ್ರಾಳಿ ಬುಡ್ನಾರು ನಿವಾಸಿ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
Sponsoredದಾಳಿ ನಡೆಸಿದ ಆರೋಪಿಯನ್ನು ಸುರೇಶ್ ಆಚಾರ್ಯ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಅಕ್ಕಸಾಲಿಗನಾಗಿರುವ ಆತ, ಆಸಿಡ್ ಹಾಗೂ ಮಾರಕಾಯುಧದೊಂದಿಗೆ ಅಂಗಡಿಗೆ ಆಗಮಿಸಿ ನವೀನ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಾಡಿಗೆ ಮನೆಯ ಠೇವಣಿ ಹಣವನ್ನು ವಾಪಸ್ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ವಿವಾದ ಉಂಟಾಗಿತ್ತು ಎನ್ನಲಾಗಿದೆ. ಈ ವಿಚಾರ ದಾಳಿಗೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣಕ್ಕೆ ಕುರಿತಂತೆ ಸುರೇಶ್ ಆಚಾರ್ಯನನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.




