ಶನಿವಾರ, 24 ಅಕ್ಟೋಬರ್ 2026

ಚಿನ್ನಾಭರಣ, ಹಣದ ರೀಲ್ಸ್ ಮಾಡಿ ಹರಿಬಿಟ್ಟ ಯುಟ್ಯೂಬರ್ ಮನೆಗೆ ಕನ್ನ ಹಾಕಿದ ಕಳ್ಳರು

ಯೂಟ್ಯೂಬರ್ ಮಹಿಳೆ ಒಬ್ಬರು ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.

ತಮಿಳುನಾಡಿನ ನಾಗರ್‌ಕೋಯಿಲ್‌ ಸಮೀಪದ ತಮ್ಮತುಕೋನಂನ ವಿಐಪಿ ಗಾರ್ಡನ್‌ನಲ್ಲಿ ವಾಸವಾಗಿರುವ ಯೂಟ್ಯೂಬರ್ ವಿನೋತ್ ಕುಮಾರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 944 ಗ್ರಾಂ ಚಿನ್ನ ಮತ್ತು ನಗದನ್ನು ಕಳ್ಳರು ದೋಚಿದ್ದಾರೆ. 

ಇತ್ತೀಚೆಗೆ, ದಂಪತಿ ತಮ್ಮ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮನೆಯಲ್ಲಿ ಯೂಟ್ಯೂಬರ್ ವಿನೋತ್ ಕುಮಾರ್‌, ಪತ್ನಿ ಮಧುಮಿತಾ ವಾಸವಾಗಿದ್ದರು. ರಾತ್ರಿಯ ವೇಳೆ ಅಪರಿಚಿತರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಾಜಕ್ಕಮಂಗಲಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳು ಮತ್ತು ದಂಪತಿಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದಾರೆ.