ಶನಿವಾರ, 24 ಅಕ್ಟೋಬರ್ 2026

ತಂದೆಯನ್ನೇ ಚೀಲಕ್ಕೆ ತುಂಬಿ ಕೊರಿಯರ್‌ ಮಾಡಲು ಬಂದ ಮಗಳು!

ಬೆಂಗಳೂರು ಮಾ.18: ರೀಲ್ಸ್‌ ಮಾಡುವ ಚಟಕ್ಕೆ ಬಿದ್ದ ಘಟನೆಯಲ್ಲಿ ವೃದ್ಧ ವ್ಯಕ್ತಿಯನ್ನೇ ಚೀಲದಲ್ಲಿ ಹಾಕಿ ಕೊರಿಯರ್‌ ಮಾಡಲು ಕುಟುಂಬವೊಂದು ಯತ್ನ ಮಾಡಿರುವ ಘಟನೆ ನಡೆದಿದೆ.

ಮಹಿಳೆ, ಆಕೆಯ ಪತಿ, ಅತ್ತೆ, ಮಾವ ಸೇರಿ ಐವರು ಮಂಗಳವಾರ ವ್ಯಾಲಿಕಾವಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕೊರಿಯರ್‌ ಕಚೇರಿಗೆ ದೊಡ್ಡ ಪ್ಯಾಕೇಜ್‌ ಹೊತ್ತು ತಂದಿದ್ದು, ಇಷ್ಟು ದೊಡ್ಡ ಚೀಲ ನೋಡಿದ ಕೊರಿಯರ್‌ ಸಿಬ್ಬಂದಿ ಇದರೊಳಗೆ ಏನಿದೆ? ಎಂದು ಪ್ರಶ್ನೆ ಮಾಡಿದಾಗ ಕುಟುಂಬದವರು ಯಾವುದೇ ಉತ್ತರ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್‌ ಓಪನ್‌ ಮಾಡಿ ನೋಡಿದಾಗ ವೃದ್ಧ ವ್ಯಕ್ತಿಯೋರ್ವರು ಚೀಲದಲ್ಲಿ ಇರೋದು ಗೊತ್ತಾಗಿದೆ. ಆತ ಕೊರಿಯರ್‌ ಮಾಡಲು ಬಂದಿದ್ದ ಕುಟುಂಬದ ಮಹಿಳೆಯ ತಂದೆ ಎಂದು ತಿಳಿದು ಬಂದಿದೆ.

ಆದರೂ ಕುಟುಂಬದವರು ಮಾತ್ರ ತಾವು ಮಾಡಿದ ಕೆಲಸವನ್ನು ಸಮರ್ಥನೆ ಮಾಡಿದ್ದಾರೆ. ಯುಗಾದಿ ಮತ್ತು ರಂಜಾನ್​​ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು, ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇವರ ಈ ಹುಚ್ಚಾಟದಿಂದ ರೋಸಿ ಹೋದ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಆದರೂ ಅಷ್ಟು ದೂರದಿಂದ ತಗೊಂಡು ಬಂದಿದ್ದೇವೆ. ದಯವಿಟ್ಟು ಪಾರ್ಸೆಲ್‌ ಮಾಡಿ ಎಂದು ಮತ್ತೆ ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ಕೊನೆಗೂ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಕುಟುಂಬದವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ನಂತರ ತಮ್ಮದು ತಪ್ಪಾಯ್ತು ಎಂದು ಕುಟುಂಬದವರು ಕ್ಷಮೆಯಾಚನೆ ಮಾಡುವ ವಿಡಿಯೋ ದಾಖಲು ಮಾಡಿ, ಗಂಭೀರ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ.

https://www.instagram.com/reel/DWAv9frAYie/?utm_source=ig_web_copy_link&igsh=NTc4MTIwNjQ2YQ==