ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ನ ಕ್ರಾಂತಿವೀತ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ 2 ತಿಂಗಳ ಗರ್ಭಿಣಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಪ್ರಯಾಣಿಕನೋರ್ವ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕಾನ್‌ಸ್ಟೇಬಲ್ ಶಿಲ್ಪಾ ಅವರಿಗೆ ಬರೋಬ್ಬರಿ 23 ಹೊಲಿಗೆಗಳು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Sponsoredಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆ ಈ ಘಟನೆ ನಡೆದಿದೆ. ಆರೋಪಿ ಗಜೇಂದ್ರ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದು, ಈ ಕುರಿತು ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದನು. ಕಾನ್‌ಸ್ಟೇಬಲ್ ಶಿಲ್ಪಾ ಕರ್ತವ್ಯದಲ್ಲಿದ್ದರು. ಠಾಣೆಯಲ್ಲಿ ಇನ್ಯಾರೂ ಅಧಿಕಾರಿಗಳಿಲ್ಲದ ಕಾರಣ ಬೆಳಗ್ಗೆ ಬಂದು ದೂರು ನೀಡಿ ಎಂದು ಶಿಲ್ಪಾ ಹೇಳಿದ್ದರು.
ಆರೋಪಿ ಸಂಪೂರ್ಣ ಕುಡಿದ ಮತ್ತಿನಲ್ಲಿದ್ದಿದ್ದು, ಠಾಣೆಯಲ್ಲೇ ಇದ್ದು ಕಬ್ಬಿಣದ ರಾಡ್ ತೆಗೆದುಕೊಂಡು ಶಿಲ್ಪಾ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ಶಿಲ್ಪಾ ಅವರಿಗೆ ಈ ಹಲ್ಲೆಯಿಂದ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು 23 ಹೊಲಿಗೆಗಳನ್ನು ಹಾಕಿದ್ದು, ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿರುವ ಕುರಿತು ವರದಿಯಾಗಿದೆ.
ಗರ್ಭಿಣಿ ಸಿಬ್ಬಂದಿಗೆ ನೈಟ್ ಡ್ಯೂಟಿ ನಿಯೋಜನೆ ಮತ್ತು ಠಾಣೆಯಲ್ಲಿ ಭದ್ರತಾ ಲೋಪದ ಕುರಿತು ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದೆ.



