ಯುವತಿ ಒಬ್ಬಳು ಪ್ರೀತಿ ನಿರಾಕರಿಸಿದಳು ಎಂದು ಆಕೆಯ ಎದುರಿಗೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಆತ ಆಕೆಯನ್ನೂ ತಬ್ಬಿಕೊಂಡ ಶಾಕಿಂಗ್ ಘಟನೆ ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜಿನ ಹಾಸ್ಟೆಲ್ ಬಳಿ ಮಂಗಳವಾರ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್ (27) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಪಿಯುಸಿವರೆಗೆ ಓದಿ ವ್ಯವಸಾಯ ಮಾಡುತ್ತಿದ್ದ ಚಂದನ್, ಅದೇ ಗ್ರಾಮದ ಯುವತಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಯುವಕನ ಕಿರುಕುಳ ತಾಳಲಾರದೆ ಯುವತಿಯ ಪೋಷಕರು ಹಲಗೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ರಾಜಿ ಪಂಚಾಯಿತಿ ನಡೆಸಿ ಎಚ್ಚರಿಕೆ ನೀಡಿದ್ದರೂ, ಚಂದನ್ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದನು.
ಮಂಗಳವಾರ ಯುವತಿಯು ಹಾಸ್ಟೆಲ್ನಿಂದ ಕಾಲೇಜಿಗೆ ತೆರಳುತ್ತಿದ್ದಾಗ ಆಕೆಯನ್ನು ಅಡ್ಡಗಟ್ಟಿ, ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಪೀಡಿಸಿದ್ದಾನೆ. ಆಕೆ ಮತ್ತೆ ನಿರಾಕರಿಸಿದಾಗ, ತನ್ನ ಮೇಲೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಯುವತಿಯನ್ನೂ ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಕೂಡಲೇ ಅಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಹಾದಿಪೋಕರು ಯುವತಿಯನ್ನು ರಕ್ಷಿಸಿ, ಚಂದನ್ ಮೇಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಈ ಭೀಕರ ಘಟನೆಯಲ್ಲಿ ಚಂದನ್ಗೆ ಶೇ. 50 ರಷ್ಟು ಸುಟ್ಟಗಾಯಗಳಾಗಿದ್ದು, ಆತನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಯುವತಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

