ಶನಿವಾರ, 24 ಅಕ್ಟೋಬರ್ 2026

ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಕೊಲೆ

ಮುಂಬೈ, ಜೂ.26: ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಡೋರ್‌ ಹಾಕುವ ವಿಷಯಕ್ಕೆ ಇಬ್ಬರು ಯುವಕರ ನಡುವೆ ಕಿರಿಕ್‌ ಆಗಿದ್ದು, ಕುಡಿದ ಮತ್ತಿನಲ್ಲಿದ್ದ ರೋಶನ್‌ ಸುವರ್ಣ (30) ಎನ್ನುವ ಯುವಕ ತನ್ನ ಬ್ಯಾಗಿನಲ್ಲಿದ್ದ ಚೂರಿಯಿಂದ ಮಯಾಂಕ್‌ ಲೋಹರ್‌ (21) ಎನ್ನುವವನ ಹೊಟ್ಟೆಗೆ ಇರಿದು ನಂತರ ರೈಲಿನಿಂದ ಹೊರಕ್ಕೆ ಹಾರಿ ಪರಾರಿಯಾಗಿದ್ದು, ನಂತರ ಮಂಗಳೂರಿಗೆ ಪಲಾಯನ ಮಾಡಲು ನೋಡುತ್ತಿರುವಾಗಲೇ ಪೊಲೀಸರು ಈತನನ್ನು ಬಂಧನ ಮಾಡಿದ್ದಾರೆ.

ಮುಂಬೈನ ಚರ್ಚ್‌ಗೇಟ್‌-ನಲಸೋಪಾರಾ ನಡುವೆ ಸಾಗುತ್ತಿದ್ದ ಎಸಿ ಲೋಕಲ್‌ ಟ್ರೈನ್‌ನ ಫಸ್ಟ್‌ಕ್ಲಾಸ್‌ ಬೋಗಿಯಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಾಗುತ್ತಿದ್ದ ಕಾರಣ ರೈಲಿನ ಮುಚ್ಚಿದ ಬಾಗಿಲನ್ನು ತೆರೆಯುವ ವಿಚಾರಕ್ಕೆ ಮೀರಾ ರೋಡ್‌-ಅಂಧೇರಿ ನಿವಾಸಿಯಾದ ರೋಶನ್‌ ಸುವರ್ಣ ಮತ್ತು ವಿರಾರ್‌ ನಿವಾಸಿ ಮಯಾಂಕ್‌ ಲೋಹರ್‌ ನಡುವೆ ವಾಗ್ವಾದ ನಡೆದಿತ್ತು.

ರೋಶನ್‌ ಬಾಗಿಲು ತೆರೆದಾಗ ನೀರು ಒಳಗೆ ಬಂದಿದ್ದು, ಮಯಾಂಕ್‌ ಬಾಗಿಲನ್ನು ಮತ್ತೆ ಮುಚ್ಚಿದ್ದ. ಇದರಿಂದ ಜಗಳ ಶುರುವಾಗಿದ್ದು, ಸಹ ಪ್ರಯಾಣಿಕರು ರೋಶನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಅವಮಾನಕ್ಕೊಳಗಾದ ರೋಶನ್‌, ಗೋರೆಗಾಂವ್‌ ಮತ್ತು ಮಲಾಡ್‌ ನಿಲ್ದಾಣಗಳ ಮಧ್ಯೆ ರೈಲು ಚಲಿಸುತ್ತಿರುವಾಗ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಮಯಾಂಕ್‌ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದಿದ್ದ. ನಂತರ ರೈಲಿನಿಂದ ಹಾರಿ ಪರಾರಿಯಾಗಿದ್ದ.

ಕೊಲೆ ಮಾಡಿದ ನಂತರ ಬೊರಿವಿಲಿ ನಿಲ್ದಾಣದಲ್ಲಿ ರೈಲು ನಿಲ್ಲುವ ಮುನ್ನವೇ ರೋಶನ್‌ ಕೆಳಗೆ ಜಿಗಿದು ಪರಾರಿಯಾಗಿದ್ದು, ಅಲ್ಲಿಂದ ಆಟೋ ರಿಕ್ಷಾ ಮೂಲಕ ಮೀರಾ ರೋಡ್‌ನಲ್ಲಿರುವ ತನ್ನ ಮನೆಗೆ ತಲುಪಿದ್ದಾನೆ. ಯಾರಿಗೂ ಘಟನೆ ಕುರಿತು ತಿಳಿಸದೆ ಸ್ನಾನ ಮಾಡಿ ತನ್ನ ಕೆಲವು ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಂಡು ಕೆಲ ದಿನಗಳ ಮಟ್ಟಿಗೆ ಮಂಗಳೂರಿಗೆ ಹೋಗುವೆ ಎಂದು ಹೆತ್ತವರಿಗೆ ತಿಳಿಸಿ, ಮನೆಯಿಂದ ಹೊರಟು ಪನ್ವೇಲ್‌ಗೆ ಓಲಾ ಕ್ಯಾಬ್‌ ಬುಕ್‌ ಮಾಡಿದ್ದ. ಪನ್ವೇಲ್‌ನಿಂದ ಮಂಗಳೂರಿಗೆ ಹೊರಡುವ ಮಧ್ಯಾಹ್ನ 3 ಗಂಟೆಯ ಬಸ್‌ ಟಿಕೆಟ್‌ ಅನ್ನೂ ಬುಕ್‌ ಮಾಡಿಕೊಂಡಿದ್ದ.

ಆರೋಪಿಯ ಪತ್ತೆಗಾಗಿ ಬೊರಿವಿಲಿ ರೈಲ್ವೇ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಚರ್ಚ್‌ ಗೇಟ್‌ನಿಂದ ನಲಸೋಪಾರವರೆಗಿನ ಸುಮಾರು 400 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ನೋಡಿದ ಪೊಲೀಸರಿಗೆ ರೋಶನ್‌ ಧರಿಸಿದ್ದ ಟೀ ಶರ್ಟ್‌ ಮೇಲಿದ್ದ ಕಾರ್ಗೋ ಕಂಪನಿಯ ಲೋಗೋ ಸ್ಪಷ್ಟವಾಗಿ ಕಂಡಿತ್ತು. ಅಂಧೇರಿ ವಿಮಾನ ನಿಲ್ದಾಣದ ಬಳಿಯಿರುವ ಕಾರ್ಗೋ ಸಂಸ್ಥೆಗೆ ಭೇಟಿ ನೀಡಿದ ಪೊಲೀಸರು ಆರೋಪಿಯ ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ಪತ್ತೆ ಹಚ್ಚಿ, ಆರೋಪಿಯ ಲೊಕೇಶನ್‌ ಟ್ರ್ಯಾಕ್‌ ಮಾಡಿದಾಗ ಆತ ಮೀರಾ ರೋಡ್‌ನಿಂದ ಪನ್ವೇಲ್‌ ಕಡೆಗೆ ಪ್ರಯಾಣ ಮಾಡುತ್ತಿರುವುದು ತಿಳಿದು ಬಂದಿದೆ.

ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರೋಶನ್‌ನನ್ನು ಪೊಲೀಸರು ಸುತ್ತುವರಿದು ರೋಶನ್‌ನನ್ನು ವಶಕ್ಕೆ ಪಡೆದರು.

ರೋಶನ್‌ ಪೊಲೀಸರು ಸುತ್ತುವರಿದು ವಶಕ್ಕೆ ಪಡೆಯುತ್ತಲೇ ಗಾಬರಿಗೊಂಡಿದ್ದು, ತಾನು ಇರಿದ ಯುವಕನ ಸ್ಥಿತಿ ಹೇಗಿದೆ ಎಂದು ಕೇಳಿದ್ದ. ಆತ ಜಾಲತಾಣದಲ್ಲಿ ಸಾವಿನ ಸುದ್ದಿಯನ್ನು ನೋಡಿ ತಿಳಿದಿದ್ದರೂ, ಪೊಲೀಸರು ಯುವಕ ಗಾಬರಿಯಿಂದ ಏನಾದರೂ ತಪ್ಪು ಹೆಜ್ಜೆ ಇಡಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ʼಮಯಾಂಕ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿ ನಂಬಿಸಿ ಆತನನ್ನು ಬೊರಿವಿಲಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಗೆ ಕರೆದುಕೊಂಡ ಹೋದ ನಂತರವೇ ಕೊಲೆ ಆರೋಪದಡಿ ಬಂಧಿಸುತ್ತಿರುವುದಾಗಿ ತಿಳಿಸಲಾಯಿತು.