ಶನಿವಾರ, 24 ಅಕ್ಟೋಬರ್ 2026

Belagavi : ಮಾಜಿ ಶಾಸಕರ ಪುತ್ರನನ್ನು ಪೆಟ್ರೋಲ್ ಸುರಿದು ಕಾರು ಸಮೇತ ಸುಟ್ಟ ದುಷ್ಕರ್ಮಿಗಳು !!

Belagavi : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕರ ಪುತ್ರನೊಬ್ಬರು ಧಾರವಾಡದ ಬಳಿ  ಕಾರಿನಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಮೇಲ್ನೋಟಕ್ಕೆ ಕೊಲೆಯ ರೀತಿಯಲ್ಲಿ ಕಂಡು ಬಂದಿದ್ದು ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಮೃತಪಟ್ಟ ದುರ್ದೈವಿ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಬಳಿಯಿರುವ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟಾರಣ್ಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ರಾಜು ಬೋಳಶೆಟ್ಟಿ ಅವರು ತಮ್ಮದೇ ಆದ ವ್ಯಾಗನರ್ ಕಾರಿನಲ್ಲಿ ಸುಟ್ಟು ಬೂದಿಯಾಗಿದ್ದಾರೆ.

ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಮೊದಲು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಿರ್ಜನ ಪ್ರದೇಶಕ್ಕೆ ತಂದು ಅವರದೇ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗಿದೆ. ಕಾರಿನಲ್ಲಿದ್ದ ಶವ ಸಂಪೂರ್ಣ ಸುಟ್ಟು ಕರಕಲಾಗಿದೆ. 

ಸ್ಥಳಕ್ಕೆ ಧಾರವಾಡದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಗತಿಪರ ರೈತನಾಗಿದ್ದ ರಾಜು ಬೋಳಶೆಟ್ಟಿ

 ರಾಜು ಬೋಳಶೆಟ್ಟಿ ಅವರು ರಾಜಕೀಯದಲ್ಲಿ ಇರದೇ ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದರು. ಗ್ರಾಮದಲ್ಲಿ ಯಾರೊಂದಿಗೂ ವೈಷ್ಯಮವಿರಲಿಲ್ಲ. ಎಲ್ಲರೊಂದಿಗೆ ಆತ್ಮಿಯವಾಗಿದ್ದರು, ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಈ ಶವ ಅವರದ್ದಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಆದ್ರೆ ಕಾರು ಮಾತ್ರ ರಾಜು ಅವರದ್ದೇ ಎಂದು ರಾಜು ಸ್ನೇಹಿತ ಶ್ರೀಧರ್‌ ಹೇಳಿಕೆ ನೀಡಿದ್ದಾರೆ.