ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರನ್ನು ಶಾಲೆಯ ಆವರಣದಲ್ಲಿಯೇ ಮುಸುಕುಧಾರಿ ಯುವಕ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.
ಸಂಧ್ಯಾ (29) ಮೃತ ಶಿಕ್ಷಕಿ. ಅಮಿತ್ (21) ಕೊಲೆಗೈದ ಆರೋಪಿ. 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದು ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ. ಈ ಕುರಿತ ದೃಶ್ಯ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗೆ ಶಾಲೆಗೆ ಬಂದಿದ್ದ ಮುಸುಕುಧಾರಿ ವ್ಯಕ್ತಿ ಶಿಕ್ಷಕಿ ಜೊತೆ ಮಾತನಾಡಬೇಕಿದೆ ಎಂದು ಹೇಳಿ ಗೇಟ್ ಬಳಿ ಕಾಯುತ್ತಿದ್ದ. ನಂತರ ಸಂಧ್ಯಾ ಹೊರಗೆ ಬಂದಾಗ ಆಕೆಯ ಕುತ್ತಿಗೆ ಹಿಡಿದು ಎಳೆದುಕೊಂಡು ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.
ಆಕೆಯ ಕುತ್ತಿಗೆ, ಎದೆ, ಮುಖ, ಹೊಟ್ಟೆಗೆ ಅರ್ಧ ನಿಮಿಷದಲ್ಲಿಯೇ 30ಕ್ಕೂ ಹೆಚ್ಚು ಬಾರಿ ಚಾಕು ಇರಿದಿದ್ದಾನೆ. ಶಿಕ್ಷಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದೆ ಮತ್ತೆ ಮತ್ತೆ ದಾಳಿ ಮಾಡಿದ್ದು, ಕಿರುಚಾಟ ಕೇಳಿ ಓಡಿ ಬಂದ ಶಾಲೆಯ ಆಡಳಿತಾಧಿಕಾರಿ ತಡೆಯಲು ಯತ್ನ ಮಾಡಿದಾಗ ಅವರ ಮೇಲೂ ಚಾಕು ತೋರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸಂಧ್ಯಾಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರು ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಸಂದರ್ಭ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸುಮಾರು ಎರಡು ವರ್ಷಗಳಿಂದ ಅಮಿತ್ ಶಿಕ್ಷಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸಂಧ್ಯಾ ಅವರು ಹಲವು ಬಾರಿ ದೂರವಿರಲು ಎಚ್ಚರಿಕೆ ನೀಡಿದ್ದರೂ ಆತ ಕಿರುಕುಳ ಮುಂದುವರಿಸಿದ್ದ. ಈತನ ವಿರುದ್ಧ ಕೆಲವು ದಿನಗಳ ಶಿಕ್ಷಕಿ ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಅದೇ ಸೇಡಿನಿಂದ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸಿದ್ದಾರೆ.




