ಮಂಗಳೂರು, ಜೂನ್ 27: ವೃದ್ಧ ಮಹಿಳೆಯೊಬ್ಬರ ಚಿನ್ನದ ಸರ ಕಳವು ಪ್ರಕರಣಕ್ಕೆ ಕುರಿತಂತೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದು, ಮತ್ತೋರ್ವ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಿರುವ ಕುರಿತು ವರದಿಯಾಗಿದೆ.
ಜೂನ್ 14ರಂದು ಮಧ್ಯಾಹ್ನ ಸುಮಾರು 12.30ಕ್ಕೆ ಎಕ್ಕೂರು ಬಸ್ ನಿಲ್ದಾಣದಿಂದ ಇಳಿದು ಸೂಟರ್‌ಪೇಟೆಯ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯ ಬಳಿ ಆರೋಪಿಗಳು ಬಂದು ವಿಳಾಸ ಕೇಳುವ ನೆಪದಲ್ಲಿ, ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಂ ತೂಕದ ಲಕ್ಷ್ಮಿ ಪೆಂಡೆಂಟ್ ಹೊಂದಿದ್ದ ರೂ 1.50 ಲಕ್ಷ ಮೌಲ್ಯದ ಚಿನ್ನದ ಸರವನ್ನು, ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂನ್ 26ರಂದು ಬೆಳಿಗ್ಗೆ ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಅವರು ಸರ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳಾದ ರವಿ ಬೌರಾ (38) ಹಾಗೂ ಮೊಹಮ್ಮದ್ ಸಾಹಿಲ್ @ ಸಿದ್ದೀಖಿ (26) ಅವರನ್ನು ಬಂಧನ ಮಾಡಿ, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರನ್ನು ಜುಲೈ 6ರವರೆಗೆ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇನ್ನೋರ್ವ ಆರೋಪಿ ಬಾಗಲಕೋಟೆ ಮೂಲದ ಅಲ್ತಾಫ್ ಹುಸೈನ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವಿನಾಯಕ ಅವರಿಗೆ ಸಣ್ಣ ಪ್ರಮಾಣದಗಾಯಗಳಾಗಿರುವುದಾಗಿ ವರದಿಯಾಗಿದೆ. ಈ ಘಟನೆ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.



