ಶನಿವಾರ, 24 ಅಕ್ಟೋಬರ್ 2026

ಕಾರೊಳಗೆ ಪ್ರೇಮಿಗಳ ಗಲಾಟೆ – ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆ!!

ಪ್ರೇಮಿಗಳಿಬ್ಬರು ಕಾರೊಳಗೆ ಕುಳಿತು ಗಲಾಟೆ ಮಾಡಿಕೊಂಡಿದ್ದು, ಬಳಿಕ ಯುವಕ ಪೆಟ್ರೋಲ್‌ ಬಾಂಬ್‌ ಸಿಡಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರಾ (Shira) ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ.

ನಾಗೇಂದ್ರ (30) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ . ತುಮಕೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಕುಳಿತು ಪೆಟ್ರೋಲ್‌ ಬಾಂಬ್‌ ಸಿಡಿಸಿಕೊಂಡಿದ್ದಾನೆ. ಇದರಿಂದ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ. 

ಇಬ್ಬರು ಕಾರಿನಲ್ಲಿ ಬೆಂಗಳೂರಿನಿಂದ ಅಂಕೋಲಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ಕಾರಿನಲ್ಲಿದ್ದ ಯುವತಿ ತಲೆಗೆ ನಾಗೇಂದ್ರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಾಗೇಂದ್ರ ಬಾಡಿಗೆ ಕಾರು ಮಾಡಿಕೊಂಡು, ಮೊದಲೇ ಪ್ಲ್ಯಾನ್‌ ಮಾಡಿ ಪೆಟ್ರೋಲ್ ಬಾಂಬ್ ತೆಗೆದುಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ. ಯುವಕ – ಯುವತಿ ಪ್ರೇಮಿಗಳಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.