ಭಾನುವಾರ, 25 ಅಕ್ಟೋಬರ್ 2026
Trending

ದರ್ಬೆ ಪ್ರಕರಣ: ಪ್ರಚೋದನಕಾರಿ ಹೇಳಿಕೆ ಆರೋಪ- ಕಲ್ಲಡ್ಕ ಪ್ರಭಾಕರ್‌, ಜಗದೀಶ ಕಾರಂತ್‌ ವಿರುದ್ಧ ಪೊಲೀಸ್‌ ದೂರು

ಪುತ್ತೂರು: ಇತ್ತೀಚೆಗೆ ನಡೆದ ಅಂಗಡಿ ಮಾಲೀಕ-ಗ್ರಾಹಕರ ನಡುವಿನ ವಿವಾದ ಹಾಗೂ ಅದಕ್ಕೆ ಕುರಿತಂತೆ ವಿವಿಧ ಸಂದರ್ಭದಲ್ಲಿ ದ್ವೇಷ ಮತ್ತು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿದೆ ಎಂದು ಆರೋಪಿಸಿ ಜಗದೀಶ ಕಾರಂತ್‌ ಹಾಗೂ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಲಾಗಿರುವ ಕುರಿತು ವರದಿಯಾಗಿದೆ.

Sponsored

ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಶನಿವಾರ ಪುತ್ತೂರು ನಗರ ಠಾಣೆಗೆ ದೂರನ್ನು ನೀಡಿದ್ದಾರೆ.

ಹಿಂದೂಗಳು ಪುತ್ತೂರಿನ ವ್ಯಾಪಾರಿ ಕ್ಷೇತ್ರದಿಂದ ಹಿಂದಕ್ಕೆ ಸರಿಯಬೇಕು ಎಂಬ ಹಿನ್ನೆಲೆಯಲ್ಲಿನ ವಾಣಿಜ್ಯ ಭಯೋತ್ಪಾದನೆಯ ಮೊದಲ ಘಟನೆ, ಇಕನಾಮಿಕಲ್‌ ಜಿಹಾದ್‌, ಟೆರರಿಸಂ ಮೊದಲು ನಿಲ್ಲಿಸಿ ಎಂಬರ್ಥದ ಹೇಳಿಕೆಗಳನ್ನು ಜಗದೀಶ ಕಾರಂತ್‌ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಹಿಂದೂ ಸಮಾಜಕ್ಕೆ ಇದೊಂದು ಎಚ್ಚರಿಕೆಯ ಸಂಗತಿ ಸೇರಿ ಹಲವು ಹೇಳಿಕೆಗಳನ್ನು ನೀಡಲಾಗಿತ್ತು, ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಅಸಹನೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಕಲ್ಲಡ್ಕ ಪ್ರಭಾಕರ್‌ ಬಟ್‌ ಮಾಧ್ಯಮದ ಜೊತೆ ಮಾತನಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಸ್ವಾತಂತ್ರ್ಯಾನಂತರದ ವಿವಿಧ ಘಟನೆಗಳನ್ನು ಉಲ್ಲೇಖ ಮಾಡಿ ಮಾತನಾಡಿರುವುದನ್ನೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಇಬ್ಬರ ಹೇಳಿಕೆ ಕುರಿತು ಸಮಗ್ರ ತನಿಖೆ ನಡೆಸಿ, ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಪೊಲೀಸರಿಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಮಾನವ ಬಂಧುತ್ವ ವೇದಿಕೆ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ, ಪ್ರಮುಖರಾದ ಮಹಮ್ಮದ್‌ ಆಲಿ, ಮೌರೀಸ್‌ ಮಸ್ಕರೇನಿಯಸ್‌, ರಿಯಾಝ್‌ ಪರ್ಲಡ್ಕ, ಕೆನತ್‌ ಡಿಸೋಜ, ಉಲ್ಲಾಸ್‌ ಕೋಟ್ಯಾನ್‌, ಅಮರನಾಥ್‌ ಗೌಡ ಮತ್ತಿತರರು ದೂರು ನೀಡುವ ಸಂದರ್ಭದಲ್ಲಿ ಇದ್ದರು.