ಶನಿವಾರ, 24 ಅಕ್ಟೋಬರ್ 2026

ಲಿಂಗ ಪರಿವರ್ತಿತ ವ್ಯಕ್ತಿಯ ನಿಂದನೆ – ಖ್ಯಾತ ಯೂಟ್ಯೂಬರ್ ಧನ್ಯಾ ಹರ್ಷಿತ್ ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ಲಿಂಗಪರಿವರ್ತಿತ (Transgender) ಮಹಿಳೆಯೊಬ್ಬರ ವಿರುದ್ಧ ನಿಂದನಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ‘ಹೆಲೆನ್ ಆಫ್ ಸ್ಪಾರ್ಟಾ’ (ಧನ್ಯಾ ಹರ್ಷಿತ್ ) ಅವರನ್ನು ತ್ರಿಶೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ

ಧನ್ಯಾ ಅವರು ತಮ್ಮನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತ್ರಿಶೂರ್ ಮೂಲದ ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.ದೂರಿನ ಆಧಾರದ ಮೇಲೆ ತ್ರಿಶೂರ್‌ನ ನಾರ್ಕೋಟಿಕ್ ಸೆಲ್ ಮತ್ತು ಲಿಂಗ ನ್ಯಾಯದ ಸಹಾಯಕ ಪೊಲೀಸ್ ಆಯುಕ್ತ (ACP) ಪಿ. ಶಿಬು ನೇತೃತ್ವದ ವಿಶೇಷ ತನಿಖಾ ತಂಡವು ಕಾಸರಗೋಡಿಗೆ ತೆರಳಿ ಧನ್ಯಾಳನ್ನು ಬಂಧಿಸಿದೆ.

ತನಿಖೆಯ ಭಾಗವಾಗಿ ಆಕೆಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS), ಮಾಹಿತಿ ತಂತ್ರಜ್ಞಾನ (IT) ಕಾಯ್ದೆ, ಕೇರಳ ಪೊಲೀಸ್ ಕಾಯ್ದೆ ಹಾಗೂ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆಯ ವಿವಿಧ ಪ್ರಮುಖ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.