ಮಂಗಳೂರು: ಬಜಪೆ-ಕಟೀಲು ರಾಜ್ಯ ಹೆದ್ದಾರಿ 67 ರ ಎಕ್ಕಾರಿನ ಬೊಲೋಡಿ ಬಳಿ ಸೋಮವಾರ ಮಧ್ಯಾಹ್ನ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಪತ್ನಿ ಗಂಭೀಂರವಾಗಿ ಗಾಯಗೊಂಡಿದ್ದಾರೆ.
ಮೃತ ಬೈಕ್ ಸವಾರ ಮಹಮ್ಮದ್ ಬಶೀರ್ (45) ಎಂದು ಗುರುತಿಸಲಾಗಿದೆ. ಮೂಲತಃ ಕಿನ್ನಿಗೋಳಿ ಕಾಪಿಕಾಡಿನ ನಿವಾಸಿಯಾಗಿದ್ದ ಇವರ ಪ್ರಸ್ತುತ ಬಜಪೆ ಪಟ್ಟಣದ ವಸತಿ ಸಮುಚ್ಛಯದಲ್ಲಿ ವಾಸವಿದ್ದರು.
ಕಟೀಲು ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್ ಹಾಗೂ ಬಜಪೆ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಎಕ್ಕಾರು ಬೋಲೋಡಿ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಮಹಮ್ಮದ್ ಬಶೀರ್ ಅವರ ತಲೆಗೆ ತೀವ್ರ ಗಾಯವಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ಪತ್ನಿಯನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.



