ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಯು ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಹೀಗಾಗಿ ಯಶ್ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ.
ಜುಲೈ 24 ರಂದು ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026 ರಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಬೇಕಿದ್ದ ಸಿನಿಮಾದ ಟ್ರೈಲರ್ ಅನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಇನ್ಸ್ಟಾಗ್ರಾಮ್ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದು, ಕಾರಣ ‘ಜಾಗತಿಕ ಪಾಲುದಾರಿಕೆ’. ಎಂದಿದ್ದಾರೆ. ಅಂದ್ರೆ ‘ರಾಮಾಯಣ’ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ನಿರ್ಮಾಪಕರು ಈಗ ‘ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್’ ಜೊತೆಗೆ ಕೈಜೋಡಿಸಿದ್ದಾರೆ. ಈ ದೊಡ್ಡ ಮಟ್ಟದ ಪಾಲುದಾರಿಕೆಯಿಂದಾಗಿ, ಟ್ರೈಲರ್ ಅನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ವಿಶೇಷ ದಿನದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ನಮಿತ್ ಮಲ್ಹೋತ್ರಾ ಅವರು ಅಧಿಕೃತವಾಗಿ ಜಾಗತಿಕ ಬಿಡುಗಡೆಯ ಕಾರಣ ನೀಡಿದ್ದರೂ, ಸದ್ಯ ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸಿಜೆಪಿ ಪ್ರತಿಭಟನೆಯಿಂದಾಗಿ ಟ್ರೈಲರ್ ಬಿಡುಗಡೆ ತಡವಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ದೇಶದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಆನ್ಲೈನ್ ಲಾಂಚ್ ಅನ್ನು ಮುಂದಕ್ಕೆ ಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.



