ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ಕೂಡ ಹಾಕಲಾಗಿದ್ದು, ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನು ಮಾಡಿಸಲು ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಅಧಿಕೃತ ನಿವಾಸವು ಹುದ್ದೆಯ ಆಧಾರದ ಮೇಲೆ ಹಂಚಿಕೆಯಾಗುವುದರಿಂದ, ನಾಮಫಲಕದಲ್ಲಿ ಅಧಿಕಾರಿಯ ಹೆಸರು ಮತ್ತು ಅವರು ಹೊಂದಿರುವ ಹುದ್ದೆ ಮಾತ್ರ ಇರಬೇಕಾಗಿರುವುದು ನಿಯಮ. ಆದರೆ ಇಲ್ಲಿ ಸಂಗಾತಿಯ ಹೆಸರು ಸೇರಿಸಿರುವುದು ಸರ್ಕಾರಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಾ ಕುಳಾಯಿ ಪತ್ರದಲ್ಲಿ ಉಲ್ಲೇಖಿಸಿ ಆರೋಪಿಸಿದ್ದಾರೆ.
ಒಂದು ವೇಳೆ ಈ ನಾಮಫಲಕದ ತಯಾರಿಕೆ ಮತ್ತು ಅಳವಡಿಕೆಗೆ ಸಾರ್ವಜನಿಕ ಹಣ ವಿನಿಯೋಗವಾಗಿದ್ದರೆ, ಅದು ನಿಯಮಬಾಹಿರವಾಗುತ್ತದೆ. ಈ ಕುರಿತು ವೆಚ್ಚದ ದಾಖಲೆಗಳು, ಬಿಲ್ಗಳು ಹಾಗೂ ಶಿಷ್ಟಾಚಾರದ ಮಂಜೂರಾತಿಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ನಾಮಫಲಕ ತೆರವುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಾದ್ಯಂತ ಸರ್ಕಾರಿ ನಿವಾಸಗಳಲ್ಲಿ ಏಕರೂಪದ ಮಾರ್ಗಸೂಚಿ ಹೊರಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.




