ಶನಿವಾರ, 24 ಅಕ್ಟೋಬರ್ 2026

ಇನ್ಮುಂದೆ ವಾಟ್ಸಾಪ್ ಗೆ ಬೇಡ ನಂಬರ್, ಇನ್ಸ್ಟಾಗ್ರಾಮ್ ರೀತಿ ಬಂತು ’User Name’ ಫೀಚರ್ – ನಿಮಗಿಷ್ಟದ ಹೆಸರನ್ನು ಈಗಲೇ ರಿಸರ್ವ್ ಮಾಡಿ!!

ವಾಟ್ಸಾಪ್ ಮೆಸೇಜಿಂಗ್ ಪ್ಲ್ಯಾಟ್’ಫಾರ್ಮ್ ಹೊಸ ಫೀಚರ್ ಒಂದನ್ನು ಪರಿಚಯಿಸಲಿದ್ದು, ಇನ್ನು ಮುಂದೆ ನಂಬರ್ ಬದಲಿಗೆ ಯೂಸರ್ ನೇಮ್ ಬಳಸಲಾಗುವುದು ಎಂದು ಸಂಸ್ಥೆಯ ಸಿಇಒ ಕುನಾಲ್ ಶಾ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ಇದು ಜಾರಿಗೆ ಬರಲಿದ್ದು, ಬಳಕೆದಾರರು ಈಗಲೇ ತಮಗಿಷ್ಟವಾದ ಹೆಸರನ್ನು ರಿಸರ್ವ್ ಮಾಡಿ ಇಟ್ಟುಕೊಳ್ಳಲು ಇವರು ವಿನಂತಿಸಿಕೊಂಡಿದ್ದಾರೆ.

ಹೌದು, ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್​ನಲ್ಲಿ ಇತರರೊಂದಿಗೆ ಸಂವಹನ ನಡೆಸಲು ನೀವು ಇನ್ಮುಂದೆ ನಿಮ್ಮ ವೈಯಕ್ತಿಕ ಫೋನ್ ಸಂಖ್ಯೆಯನ್ನು ಹಂಚಿಕೊಳ್ಳಬೇಕಾಗಿಲ್ಲ. ಇನ್‌ಸ್ಟಾಗ್ರಾಂ ಮತ್ತು ಸ್ನಾಪ್‌ಚಾಟ್ ಮಾದರಿಯಲ್ಲೇ, ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೂ ಪ್ರತ್ಯೇಕ ಯೂಸರ್ ನೇಮ್ ಹೊಂದಬಹುದಾದ ಹೊಸ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಪರಿಚಯಿಸಲಾಗುತ್ತಿದೆ. ವಾಟ್ಸಾಪ್​ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವದ ಗೌಪ್ಯತೆ-ಸಂಬಂಧಿತ ಬದಲಾವಣೆ ಎಂದು ಪರಿಗಣಿಸಲಾಗುತ್ತಿದ್ದು, ಈ ಉದ್ದೇಶಕ್ಕಾಗಿ ಕಂಪನಿಯು ಬಳಕೆದಾರರ ಹೆಸರುಗಳನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ.

‘ಅಪರಿಚಿತರಿಗೆ ಫೋನ್‌ ನಂಬರ್ ಕೊಡುವುದು ಎಂದರೆ ತುಸು ಆತಂಕ ಉಂಟು ಮಾಡುತ್ತದೆ. ಏಕೆಂದರೆ ಮೊಬೈಲ್ ನಂಬರ್ ವೈಯಕ್ತಿಕವಾಗಿದ್ದು, ಅದು ಹಲವು ಪ್ರಮುಖ ವಿಚಾರಗಳೊಂದಿಗೆ ಲಿಂಕ್ ಆಗಿರುತ್ತದೆ. ಕೆಲವೊಮ್ಮೆ ಕೆಲವರಿಗೆ ಸಂದೇಶ ಕಳಿಸಲು ಮಾತ್ರ ನಾವು ಬಯಸುತ್ತೇವೆಯೇ ವಿನಃ ನಮ್ಮ ನಂಬರ್ ನೀಡಲು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕಾಗಿ ನಾವು ವಾಟ್ಸ್‌ಆ್ಯಪ್‌ನಲ್ಲಿ ಯೂಸರ್ ನೇಮ್ ಪರಿಚಯಿಸುತ್ತಿದ್ದೇವೆ’ ಎಂದು ಸಂಸ್ಥೆಯು ತಿಳಿಸಿದೆ.

ಇನ್ನು, ವಾಟ್ಸ್‌ಆ್ಯಪ್‌ ಈ ಫೀಚರ್ ಅನ್ನು ಯಾವಾಗ ಪರಿಚಯಿಸಲಿದೆ ಎಂಬ ನಿಖರ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ, ಮುಂಬರುವ ಕೆಲವು ತಿಂಗಳುಗಳಲ್ಲಿ ಇದು ಹಂತ-ಹಂತವಾಗಿ ಜಾಗತಿಕ ಮಟ್ಟದಲ್ಲಿ ಅಪ್‌ಡೇಟ್‌ ಆಗಲಿದ್ದು, ಲಭ್ಯವಾದ ತಕ್ಷಣ ಬಳಕೆದಾರರಿಗೆ ನೋಟಿಫಿಕೇಶನ್ ಮೂಲಕ ತಿಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ವಾಟ್ಸಾಪ್ ಯೂಸರ್ ನೇಮ್ ಅನ್ನು ಕಾಯ್ದಿರಿಸಿಕೊಳ್ಳುವುದು ಹೇಗೆ?

ಸೆಟ್ಟಿಂಗ್ಸ್ (Settings) ಓಪನ್ ಮಾಡಿಕೊಳ್ಳಬೇಕು

ಅಕೌಂಟ್ ( Account ) ಮೇಲೆ ಟ್ಯಾಪ್ ಮಾಡಬೇಕು

ಯೂಸರ್ ನೇಮ್ (User Name) ಆಯ್ಕೆ ಮಾಡಿಕೊಳ್ಳಬೇಕು

ಲಭ್ಯವಿರುವ ಯೂಸರ್ ನೇಮ್ ಆರಿಸಿ, ಅದನ್ನು ಕನ್ಫರ್ಮ್ ಮಾಡಿಕೊಳ್ಳಬೇಕು