ಶನಿವಾರ, 24 ಅಕ್ಟೋಬರ್ 2026

ಸದ್ಯದಲ್ಲೇ ಮುಂದಿನ ಹೊಸ ಹೋರಾಟದ ಬಗ್ಗೆ ತಿಳಿಸುತ್ತೇವೆ – ಅಭಿಜಿತ್ ದೀಪ್ಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕಾಕ್ರೋಚ್ ಜನತಾ ಪಾರ್ಟಿ ಹಿಂಪಡೆದಿದೆ. ಆದರೆ ಈ ಬೆನ್ನಲ್ಲೇ ಶೀಘ್ರದಲ್ಲೇ ತನ್ನ ಮುಂದಿನ ಹೋರಾಟದ ಕಾರ್ಯತಂತ್ರವನ್ನು ಪ್ರಕಟಿಸುವುದಾಗಿ CJP ನಾಯಕ ಅಭಿಜಿತ್ ದೀಪ್ಕೆ ತಿಳಿಸಿದ್ದಾರೆ. ಅಂದರೆ ತಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ನಿರಂತರವಾಗಿ ಹೊಸ ಹೊಸ ವಿಚಾರ ಇಟ್ಟುಕೊಂಡು ಪ್ರತಿಭಟಿಸುತ್ತೇವೆ ಎಂದು ಅವರು ತಿಳಿಸಿದಂತಿದೆ.

ಪಂಜಾಬ್‌ನಲ್ಲಿ ನಡೆದಿದೆ ಎನ್ನಲಾದ ಪೇಪರ್ ಸೋರಿಕೆ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ಪ್ರತಿಭಟನೆ ನಿನ್ನೆಯಷ್ಟೇ ಮುಗಿದಿದೆ, ಮುಂದಿನ ನಡೆಗಳ ಬಗ್ಗೆ ನಿರ್ಧರಿಸಲು ನಮಗೆ ಸ್ವಲ್ಪ ಸಮಯ ನೀಡಿ, ಶೀಘ್ರದಲ್ಲೇ ಹೊಸ ತಂತ್ರ ಘೋಷಿಸುತ್ತೇವೆ ಎಂದು ದೀಪ್ಕೆ ಹೇಳಿದ್ದಾರೆ.

ಅಲ್ಲದೆ ದೇಶಾದ್ಯಂತ ನಡೆದ ಪ್ರತಿಭಟನೆಗಳ ಸಮಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಯಾವೊಬ್ಬ ವಿದ್ಯಾರ್ಥಿಯ ಮೇಲೆಯೂ ಪ್ರಕರಣ ದಾಖಲಾಗಬಾರದು ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆಗ್ರಹಿಸಿದ್ದಾರೆ.