ಉಜಿರೆ,ದಿ.ಸೆ.27 : ಹಾಸನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ‘ರೆಸ್ಟ್ ಆಫ್ ಬೆಂಗಳೂರು’ ವಿಭಾಗ ಮಟ್ಟದ ನೆಟ್ಬಾಲ್ ಪಂದ್ಯಾವಳಿಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪುರುಷರ ನೆಟ್ಬಾಲ್ ತಂಡವು ಅಮೋಘ ಪ್ರದರ್ಶನ ನೀಡಿ ರನ್ನರ್ಸ್ ಅಪ್ (ದ್ವಿತೀಯ ಸ್ಥಾನ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
Sponsoredಪಂದ್ಯಾವಳಿಯುದ್ದಕ್ಕೂ ಎಸ್ಡಿಎಂಐಟಿ ತಂಡದ ಆಟಗಾರರು ಅತ್ಯುತ್ತಮ ತಂಡದ ಸಮನ್ವಯ, ವೇಗ, ಕೌಶಲ್ಯ ಹಾಗೂ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ ಗಮನ ಸೆಳೆದರು. ಕಠಿಣ ಪೈಪೋಟಿಯ ನಡುವೆಯೂ ಆತ್ಮವಿಶ್ವಾಸದಿಂದ ಆಟವಾಡಿದ ತಂಡವು ಅಂತಿಮ ಹಂತದವರೆಗೂ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು.
ಈ ಸಾಧನೆಯೊಂದಿಗೆ ಎಸ್ಡಿಎಂಐಟಿ ಪುರುಷರ ನೆಟ್ಬಾಲ್ ತಂಡವು ವಿಟಿಯು ರಾಜ್ಯಮಟ್ಟದ ನೆಟ್ಬಾಲ್ ಪಂದ್ಯಾವಳಿಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ತಂಡದ ನಾಯಕ ರೋಹಿತ್ ಬಿ. ಅವರ ನೇತೃತ್ವದಲ್ಲಿ ರಾಘವೇಂದ್ರ ಕೆ., ಸಂಕೇತ್ ಪಿ., ಆರ್ಯನ್ ರಾವ್, ಶ್ರೀನಿವಾಸ್ ರಾವ್, ಸಾಹಿಲ್, ಸಾಯಿ ಕುಮಾರ್ ನಾಯಕ್, ಜಗದೀಶ ಜಿ.ಎಸ್., ವಿದ್ಯಾನಂದ, ಮನಿತ್, ಚಿನ್ಮಯ್, ಅನ್ವಿತ್, ಕಾರ್ತಿಕ್ ಹಾಗೂ ವಿಕಾಸ್ ಅವರು ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡದ ಈ ಗಮನಾರ್ಹ ಸಾಧನೆಗೆ ಪ್ರಮುಖ ಕೊಡುಗೆ ನೀಡಿದರು. ತಂಡಕ್ಕೆ ತಾಂತ್ರಿಕ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್ ತರಬೇತಿ ನೀಡಿದ್ದಾರೆ.
ಈ ಸಾಧನೆಗೆ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಎಸ್ಡಿಎಂಐಟಿ ಪ್ರಾಂಶುಪಾಲ ಡಾ. ಸಂದೀಪ್ ಆರ್., ಕ್ರೀಡಾ ವಿಭಾಗದ ತರಬೇತುದಾರರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತಂಡದ ಆಟಗಾರರನ್ನು ಅಭಿನಂದಿಸಿ, ರಾಜ್ಯಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಿದ್ದಾರೆ.




