

ಸ್ವಾಮಿ ವಿವೇಕಾನಂದರು 1893ರ ಸಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ 133ನೇ ವರ್ಷಾಚರಣೆಯ ಪ್ರಯುಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ‘ವಿವೇಕ ವಿಜಯ’ ಶೀರ್ಷಿಕೆಯಡಿಯಲ್ಲಿ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ “ವರ್ತಮಾನ ಶಿಕ್ಷಣ ಮತ್ತು ಭವಿಷ್ಯ ಭಾರತ” ಎಂಬ ವಿಷಯದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಚಿಂತಕರು ಆದ ಚಕ್ರವರ್ತಿ ಸೂಲಿಬೆಲೆಯವರು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಅವರು ಮಾತನಾಡುತ್ತಾ “ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿರುವವರು. ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಜಗತ್ತಿನ ಪ್ರಭಾವದಿಂದ ತಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು, ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳ ಬಗ್ಗೆ ಅತೃಪ್ತಿ ಅಥವಾ ಕೀಳರಿಮೆಯನ್ನು ಬೆಳೆಸಿಕೊಳ್ಳುವ ಸಂದರ್ಭಗಳೂ ಇವೆ. ಇಂತಹ ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನು ಕೇವಲ ಪಾಠವನ್ನು ಬೋಧಿಸುವವನಾಗಿರಬಾರದು ಅವರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಮಾರ್ಗದರ್ಶಿಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತನ್ನ ಮಗುವಿನಂತೆ ಪ್ರೀತಿಸಿ ಅವರ ಸಾಮರ್ಥ್ಯವನ್ನು ಗುರುತಿಸಿ ಆತ್ಮವಿಶ್ವಾಸವನ್ನು ಬೆಳೆಸಿ, ಶಾಲಾ ಅವಧಿಯಲ್ಲಿ ತನ್ನ ವೈಯಕ್ತಿಕ ಚಿಂತೆಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿಂದ ಬೋಧಿಸುವ ಶಿಕ್ಷಕನೇ ನಿಜವಾದ ಅರ್ಥದಲ್ಲಿ ಶ್ರೇಷ್ಠ ಶಿಕ್ಷಕ. ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನು ತುಂಬುವುದಲ್ಲ ಮಗುವಿನೊಳಗಿರುವ ಶಕ್ತಿಯನ್ನು ಹೊರತರುವುದು ಎಂಬ ಸ್ವಾಮಿ ವಿವೇಕಾನಂದರ ಶಿಕ್ಷಣದ ತತ್ವದಲ್ಲಿ ಈ ಸಂದೇಶದ ಸಾರ ಅಡಗಿದೆ.” ಎಂದರು.
ಈ ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಗಂಗಾಧರ ರೈ ಪೆರ್ನೆ ಇವರು ಮಾತನಾಡುತ್ತಾ ” ಬ್ರಿಟಿಷರ ದಬ್ಬಾಳಿಕೆಯ ಸಂದರ್ಭದಲ್ಲಿ ನಮ್ಮವರೇ ಆದ ಸನ್ಯಾಸಿಯೊಬ್ಬರು ಚಿಕಾಗೊದ ಭಾಷಣವು ದೇಶದ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಲು ಕಾರಣವಾಯಿತು. ಆ ಸಂದೇಶದ ಸಾರವನ್ನು ನಾವೆಲ್ಲರು ಅರಿತು ಬಾಳುವ ಕೆಲಸ ಮಾಡಬೇಕು” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀಮತಿ ವತ್ಸಲಾ ರಾಜ್, ಅಧ್ಯಕ್ಷರಾದ ರವೀಂದ್ರ ಪಿ.ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪ.ಪೂ. ಕಾ. ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರೇರಣಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಸ್ವಾಗತಿಸಿ, ಉಪನ್ಯಾಸಕರಾದ ಮೋನಿಷಾ ಎನ್. ವಂದಿಸಿ, ಪವಿತ್ರ ಕಾರ್ಯಕ್ರಮವನ್ನು ನಿರೂಪಿಸಿದರು.

