ಶನಿವಾರ, 24 ಅಕ್ಟೋಬರ್ 2026

ಶ್ರೀ ಕ್ಷೇತ್ರ ಗೆಜ್ಜೆಗಿರಿ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸುವ ಉದ್ದೇಶದಿಂದ, ಶ್ರೀ ಕ್ಷೇತ್ರದ ಕಾನೂನು ಸಲಹೆಗಾರ ಯುವ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಮುಂದಾಳತ್ವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿ ಕಾರ್ಯಗಳು, ಆಡಳಿತ ವ್ಯವಸ್ಥೆ ಮತ್ತು ಭರದಿಂದ ನಡೆಯುತ್ತಿರುವ ಯಾತ್ರಿ ನಿವಾಸದ ಕಾಮಗಾರಿ ಸೇರಿ ಅಲ್ಲಿನ ವಿವಿಧ ಯೋಜನೆಗಳ ಕುರಿತು ವಿವರವಾದ ವಿಚಾರ ವಿನಿಮಯ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ನಡುವೆ ಸದಾ ನಿಕಟವಾದ ಆತ್ಮೀಯ ಸಂಬಂಧವಿದ್ದು, ಧರ್ಮಸ್ಥಳದ ಆಶೀರ್ವಾದವು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮೇಲಿರಲಿದೆ ಎಂದು ಡಾ. ವೀರೇಂದ್ರ ಹೆಗ್ಗಡೆಯವರು ಹೃತ್ತೂರ್ವಕವಾಗಿ ಆಶೀರ್ವದಿಸಿ, ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಶುಭ ಹಾರೈಸಿದರು.

ಈ ಭೇಟಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಕ್ಷೇತ್ರದ ವಾಸ್ತುತಜ್ಞ ಪ್ರಮಲ್ ಕುಮಾ‌ರ್ ಕಾರ್ಕಳ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕ್ಷೇತ್ರದ ಟ್ರಷ್ಠಿ ಜಯವಿಕ್ರಮ ಕಲ್ಲಾಪು, ಶ್ರೀ ಕ್ಷೇತ್ರದ ಟ್ರಸ್ಟಿ, ಗೆಜ್ಜೆಗಿರಿ ಮೇಳದ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ, ಕ್ಷೇತ್ರದ ಟ್ರಸ್ಟಿ ನಾರಾಯಣ ಪೂಜಾರಿ ಮಚ್ಚಿನ, ರಾಘವೇಂದ್ರ ಮಠದ ಕಾರ್ಯದರ್ಶಿ ವಸಂತ ಸುವರ್ಣ, ಕೋಶಾಧಿಕಾರಿ ಶ್ರವಣ್ ರಾಜ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.