ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರು ಮತ್ತು ಸದಸ್ಯರ ಮೇಲೆ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಬೆನ್ನಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದಷ್ಟೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ತಮ್ಮ ಮುಂದಿನ ಹೋರಾಟ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳ ಸಮಸ್ಯೆಗಳ ವಿಚಾರವಾಗಿ ಎಂಬ ಘೋಷಣೆ ಮಾಡಿದ್ದರು. ಹೀಗಾಗಿ ಜೈಪುರ ಜಿಲ್ಲೆಯ ಬಗ್ರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮ್ಪುರ ಕನ್ವರ್ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಶೀಲನೆಗೆ ಇಂದು ಸಿಜೆಪಿ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ನೇತೃತ್ವದ ತಂಡ ಆಗಮಿಸಿತ್ತು.
ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಲು ಮುಂದಾದಾಗ ಈ ದಾಳಿ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರ ಗುಂಪು ಸಿಜೆಪಿ ನಾಯಕರನ್ನು ಸುತ್ತುವರಿದು ನಿಂದಿಸಿದ್ದಾರೆ. “ಅರ್ಬನ್ ನಕ್ಸಲರು”, “ದೇಶದ್ರೋಹಿಗಳು” ಹಾಗೂ “ಪಾಕಿಸ್ತಾನಿಗಳು” ಎಂದು ಘೋಷಣೆ ಕೂಗಿ ಹಲ್ಲೆ ನಡೆಸಿದ್ದಾರೆ. ಉದ್ರಿಕ್ತ ಗುಂಪಿನಿಂದಾಗಿ ನಾಯಕರು ಶಾಲೆ ಪರಿಶೀಲಿಸದೆ ಅರ್ಧದಲ್ಲೇ ಗ್ರಾಮದಿಂದ ಕಾಲ್ಕಿತ್ತಿದ್ದಾರೆ.
ದಾಳಿಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಜೆಪಿ ಮುಖಂಡ ಅಶುತೋಷ್ ರಾಂಕಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಹಲವು ವರ್ಷಗಳಿಂದ ಈ ಶಾಲೆ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷವೂ ನಾವು ಇಲ್ಲಿಗೆ ಭೇಟಿ ನೀಡಿದ್ದೆವು. ಗ್ರಾಮಸ್ಥರ ಆಹ್ವಾನದ ಮೇರೆಗೆ ಇಂದಿನ ಭೇಟಿಯ ಬಗ್ಗೆ ಪೊಲೀಸರಿಗೂ ಮುಂಚಿತವಾಗಿ ಮಾಹಿತಿ ನೀಡಿದ್ದೆವು. ಆದರೆ, ಸ್ಥಳದಲ್ಲಿ ಮೊದಲೇ ಜಮಾಯಿಸಿದ್ದ ಬಿಜೆಪಿ ಗೂಂಡಾಗಳು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಕಾರುಗಳನ್ನು ಜಖಂಗೊಳಿಸಿ, ಮೊಬೈಲ್ಗಳನ್ನು ಒಡೆದು ಹಾಕಿದ್ದಾರೆ. ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿ, ನನ್ನ ಶರ್ಟ್ ಹರಿದು ಹಾಕಿದ್ದಾರೆ. ನಮ್ಮ ತಂಡದ ಒಬ್ಬರ ಕೈ ಮುರಿದಿದೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ, ಸ್ಥಳೀಯ ಗ್ರಾಮಸ್ಥರು ಸಿಜೆಪಿ ತಂಡದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಅವರು 200–250 ಜನರನ್ನು ಕರೆದುಕೊಂಡು ಬಂದಿದ್ದರು. ಅವರೇ ತಮ್ಮ ಕಾರನ್ನು ಒಡೆದು ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ.



