Home » ಜಾಮೀನು ಬೆನ್ನಲೇ ‘ವಿಜಯೋತ್ಸವ’ ಆಚರಣೆ – ಆರೋಪಿಯನ್ನು ತನ್ನ ಮುಂದೆ ಹಾಜರುಪಡಿಸಿ ಎಂದು ಸುಪ್ರೀಂ ಕೋರ್ಟ್ ಆದೇಶ

ಜಾಮೀನು ಬೆನ್ನಲೇ ‘ವಿಜಯೋತ್ಸವ’ ಆಚರಣೆ – ಆರೋಪಿಯನ್ನು ತನ್ನ ಮುಂದೆ ಹಾಜರುಪಡಿಸಿ ಎಂದು ಸುಪ್ರೀಂ ಕೋರ್ಟ್ ಆದೇಶ

0 comments

ಕೊಲೆ ಪ್ರಕರಣದ ಆರೋಪಿಯೊಬ್ಬನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇದರ ಬೆನ್ನಲ್ಲೇ ರಿಲೀಸ್ ಆದ ಆತ “ವಿಜಯೋತ್ಸವ ಮೆರವಣಿಗೆ” ನಡೆಸಿ ಸುದ್ದಿಯಾಗಿದ್ದಾನೆ. ಆದರೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಆತನನ್ನು ಬಂಧಿಸಿ ತಮ್ಮ ಮುಂದೆ ಹಾಜರುಪಡಿಸುವಂತೆ ಹರ್ಯಾಣ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ

2022 ರ ಅಕ್ಟೋಬರ್ 27 ರಂದು ವಿವಾದಾತ್ಮಕ ನಿವೇಶನದಲ್ಲಿ ತಗಡಿನ ಶೆಡ್ ನಿರ್ಮಿಸುವ ವಿಚಾರವಾಗಿ ನಡೆದ ಜಗಳದಲ್ಲಿ, ವಿಶಾಲ್ ಲಾಠಿ ಮತ್ತು ಕೊಡಲಿಯಿಂದ ಹಲ್ಲೆ ನಡೆಸಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ. ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದ ಈತನ ಜಾಮೀನು ಅರ್ಜಿಯನ್ನು ನಾಲ್ಕು ಬಾರಿ ತಿರಸ್ಕರಿಸಿದ್ದ ಹೈಕೋರ್ಟ್, ಕಳೆದ ಏಪ್ರಿಲ್ 23 ರಂದು ಐದನೇ ಬಾರಿಗೆ ಜಾಮೀನು ಮಂಜೂರು ಮಾಡಿತ್ತು. 

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ವಿಶಾಲ್ ಬೃಹತ್ ವಿಜಯೋತ್ಸವ ಮೆರವಣಿಗೆ ನಡೆಸಿ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾನೆ. ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, “ಜಾಮೀನು ಸಿಕ್ಕ ತಕ್ಷಣವೇ ವಿಜಯೋತ್ಸವ ಮೆರವಣಿಗೆ ನಡೆಸುವುದು ಸರಿಯಾದ ನಡವಳಿಕೆಯಲ್ಲ. ನೀವು ಮೊದಲು ಪೊಲೀಸರಿಗೆ ಶರಣಾಗಿ, ತದನಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿ. ಆ ಬಳಿಕವಷ್ಟೇ ನಾವು ನಿಮ್ಮ ವಾದ ಆಲಿಸುತ್ತೇವೆ,” ಎಂದು ಆರೋಪಿಯ ಪರ ವಕೀಲರಿಗೆ ಖಾರವಾಗಿ ತಿಳಿಸಿತು. 

ಅಲ್ಲದೆ ಹರ್ಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ (SP) ನೇರ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 21, 2026 ರಂದು ನಡೆಯಲಿರುವ ಮುಂದಿನ ವಿಚಾರಣೆಯ ವೇಳೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಜ್ಞಾಪಿಸಿದೆ. ಈ ಆದೇಶದ ಪ್ರತಿಯನ್ನು ಇಮೇಲ್ ಮೂಲಕ 24 ಗಂಟೆಗಳ ಒಳಗಾಗಿ ಎಸ್‌ಪಿಯವರಿಗೆ ತಲುಪಿಸುವಂತೆ ರಿಜಿಸ್ಟ್ರಿಗೆ ಸೂಚಿಸಲಾಗಿದೆ.

You may also like