ಭಾನುವಾರ, 25 ಅಕ್ಟೋಬರ್ 2026
Trending

ಉಜಿರೆ ಎಸ್‌.ಡಿ.ಎಂ ಕಾಲೇಜಿನಲ್ಲಿ ವಿಟಿಯು ಮಂಗಳೂರು ವಲಯ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಎಸ್‌.ಡಿ.ಎಂ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ಆಯೋಜಿಸಲಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯ ಅಂತ‌ರ್ ಕಾಲೇಜುಗಳ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

Sponsored

ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರೊ ಕಬಡ್ಡಿ ಖ್ಯಾತಿಯ ರಾಷ್ಟ್ರೀಯ ಕಬಡ್ಡಿ ಆಟಗಾರ ಗಗನ್ ಗೌಡ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕ್ರೀಡೆ ದೈಹಿಕ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡಾಳುಗಳು ಪ್ರತಿಭೆ ಮತ್ತು ಕೌಶಲ್ಯದ ಜೊತೆಗೆ ಶಿಸ್ತನ್ನು ಪಾಲಿಸಬೇಕು. ಸ್ಪರ್ಧಾಳುಗಳು ಕ್ಷಣಿಕ ಜಯದ ಸಂಭ್ರಮಕ್ಕೆ ಸೀಮಿತರಾಗದೆ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಹೆಜ್ಜೆ ಹಾಕಿದಾಗ ಯಶಸ್ಸು ಸಾಧ್ಯವಾಗುತ್ತದೆ. ಇದು ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುತ್ತದೆ ಎಂದು ಕ್ರೀಡಾ ಪಟುಗಳಿಗೆ ಶುಭಹಾರೈಸಿದರು.