ಅವಳಿ ಸಹೋದರರನ್ನು ಅವಳಿ ಅಕ್ಕತಂಗಿಯರು ವರಿಸುವುದು ಅನೇಕ ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಅಂತೆಯೇ ಇದೀಗ ಕೇರಳದಲ್ಲಿ ಅವಳಿ ಸಹೋದರರನ್ನು ಅವಳಿ ಅಕ್ಕತಂಗಿಯರು ಮದುವೆಯಾಗಿದ್ದಾರೆ. ಇದು ಸಾಮಾನ್ಯವೇ ವಿಚಾರ. ಆದರೆ ಅಪರೂಪದ ಸಂಗತಿ ಏನೆಂದರೆ ಈ ಅವಳಿಗಳ ಮದುವೆಯನ್ನು ಮಾಡಿಸಿದ್ದು ಅವಳಿ ಪುರೋಹಿತರು ಎಂಬುದು!! ಸದ್ಯ ಇದು ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೌದು, ಕೇರಳದ ಕೊಟ್ಟಯಂ ನ ಚಂಗನಶ್ಶೇರಿ ಮೆಟ್ರೋಪಾಲಿಟನ್ ಚರ್ಚ್ನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಅಖಿಲ್ ಕೆ. ಥಾಮಸ್ ಎಂಬುವರು ಮ್ಯಾಗಿ ಮೇರಿ ಥಾಮಸ್ ಅವರನ್ನು ವರಿಸಿದರೆ, ಅವರ ಅವಳಿ ಸಹೋದರ ನಿಖಿಲ್ ಕೆ. ಥಾಮಸ್ ಅವರು ಮಾರಿಯಾ ಮೇರಿಯ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ಎರಡೂ ಕುಟುಂಬಗಳು ಬಹಳ ಖುಷಿಯಿಂದ ಸಮ್ಮತಿ ನೀಡಿ, ಸಮಾರಂಭವನ್ನು ಜೋರಾಗಿ ನಡೆಸಿಕೊಟ್ಟಿವೆ.
ಆದರೆ ಮದುವೆ ನೆರವೇರಿಸಿದವರೂ ಅವಳಿ ಪುರೋಹಿತರೇ ಎಂಬ ಸಂಗತಿಯನ್ನು ತಿಳಿದು ಸ್ವತಃ ವಿವಾಹ ಸಂಭ್ರಮಕ್ಕೆ ಆಗಮಿಸಿದ್ದ ಅತಿಥಿಗಳೇ ಒಂದು ನಿಮಿಷ ಅಚ್ಚರಿ ಪಟ್ಟಿದ್ದಾರೆ. ಇಷ್ಟೇ ಅಲ್ಲ, ಪುರೋಹಿತರಿಗೆ ಸಹಾಯ ಮಾಡಿದ ಬಾಲಕರೂ ಸಹ ಅವಳಿಯೇ ಆಗಿದ್ದರು ಎಂಬುದು ವಿಶೇಷ.
ಅಂದಹಾಗೆ ಮ್ಯಾಗಿ ಮತ್ತು ಮಾರಿಯಾ ಬಾಲ್ಯದಿಂದಲೇ ಇಬ್ಬರೂ ಅವಳಿ ಸಹೋದರರನ್ನೇ ಮದುವೆಯಾಗುವ ಕನಸನ್ನು ಹೊಂದಿದ್ದರಂತೆ. ಅದಕ್ಕೆ ತಕ್ಕಂತೆಯೇ ಯುವತಿಯರ ಪೋಷಕರು ಸಹ ಮಕ್ಕಳ ಆಸೆಯನ್ನು ಈಡೇರಿಸಲು ಕೊಥನಲ್ಲೂರಿನ ಚರ್ಚ್ ಮೂಲಕ ಅವಳಿ ಪುರೋಹಿತರನ್ನೇ ಸಂಪರ್ಕಿಸಿದ್ದರು. ದೇವರ ಕೃಪೆಯಿಂದ ನಾವುಗಳು ಅಂದುಕೊಂಡಂತೆ ಮದುವೆ ಸಂಭ್ರಮದಿಂದ ನೆರವೇರಿತು ಎಂದು ನವ ಜೋಡಿಗಳು ಹೇಳಿಕೊಂಡಿದ್ದಾರೆ.




