ಸೋಮವಾರ, 26 ಅಕ್ಟೋಬರ್ 2026
Trending

ಕೊಡಗಿನಲ್ಲಿ ಲೋಹಯುಗದ ನಾಗರೀಕತೆ ಕುರುಹು ಪತ್ತೆ!

ಹಸಿರು ಹಾಸಿನ ಪ್ರಕೃತಿ ಸೌಂದರ್ಯದಿಂದಾಗಿ ‘ದಕ್ಷಿಣ ಕಾಶ್ಮೀರ’ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿ ಇದೀಗ ಸಾವಿರಾರು ವರ್ಷಗಳ ಹಿಂದಿನ ಮಾನವ ನಾಗರಿಕತೆಯ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರ ಗಮನ ಸೆಳೆಯುತ್ತಿವೆ.

Sponsored

ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮೊರೆಬೆಟ್ಟದ ತಪ್ಪಲಿನಲ್ಲಿರುವ ದೊಡ್ಡಮೊಳತೆ ಮತ್ತು ಸುಲಿಮೊಳತೆ ಗ್ರಾಮಗಳ ಸುತ್ತಮುತ್ತ ಕಬ್ಬಿಣಯುಗದ (Iron Age) ಅಪೂರ್ವ ಕುರುಹುಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈ ತಾಣಗಳು ಅಂದಿನ ಮಾನವನ ಬದುಕಿನ ಶೈಲಿ, ನಂಬಿಕೆಗಳು ಹಾಗೂ ಅವರ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಸಾಕ್ಷಿಗಳಾಗಿವೆ.

Advertisement

ದೊಡ್ಡ ಮೊಳತೆ ಸಮಾಧಿ ತಾಣದಲ್ಲಿ, ಕಲ್ಲಿನ ವೃತ್ತಗಳಿಂದ ಆವೃತವಾಗಿರುವ 20ಕ್ಕೂ ಹೆಚ್ಚು ಡಾಲ್ಮೆನ್‌ಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಮೌನವಾಗಿ ಹೇಳುತ್ತಿವೆ. ಪ್ರತಿ ಡಾಲ್ಮೆನ್‌ನ ಪ್ರವೇಶದ್ವಾರದಲ್ಲಿ ಜೋಡಿಯಾಗಿ ನಿಂತಿರುವ ಬಾಗಿದ ಕಲ್ಲಿನ ಚಪ್ಪಡಿಗಳು ಕಮಾನುಗಳಂತೆ ಕಾಣುತ್ತವೆ. ಕೆಲವೊಮ್ಮೆ ಅವು ಮಾನವಾಕೃತಿಯ ಭಾವವನ್ನೂ ಮೂಡಿಸುತ್ತವೆ. 

ಇಲ್ಲಿನ ಡಾಲ್ಮೆನ್‌ಗಳ ವಾಸ್ತುಶಿಲ್ಪ ಶೈಲಿಯೂ ಅತ್ಯಂತ ವಿಶಿಷ್ಟವಾಗಿದೆ. ಪೂರ್ವ ದಿಕ್ಕಿನ ಆರ್ಥೋಸ್ಟಾಟ್‌ಗಳ ಮೇಲೆ ನಿರ್ಮಿಸಲಾದ ವೃತ್ತಾಕಾರದ ಪೋರ್ಟ್ಹೋಲ್‌ಗಳು ಹಾಗೂ ಅವುಗಳ ಸುತ್ತಲೂ ರಕ್ಷಣೆಯಂತೆ ನಿಂತಿರುವ ಕಲ್ಲಿನ ಚಪ್ಪಡಿಗಳು ಅಂದಿನ ವಿಶಿಷ್ಟ ತಂತ್ರಜ್ಞಾನವನ್ನು ಅನಾವರಣಗೊಳಿಸುತ್ತವೆ. ಇತಿಹಾಸದ ಈ ರೋಚಕ ನೆನಪುಗಳು ಕೊಡಗಿನ ಪ್ರಾಚೀನತೆಯ ಆಳವನ್ನು ಜಗತ್ತಿಗೆ ಸಾರುತ್ತಿವೆ.