ಶನಿವಾರ, 24 ಅಕ್ಟೋಬರ್ 2026

ದೇವಾಲಯದ ಹಣಕಾಸಿಗೆ ಹೈಕೋರ್ಟ್ ಬ್ರೇಕ್: ನಕಲಿ ರಶೀದಿ, ಹಣ ದುರುಪಯೋಗ ತಡೆಗೆ ಡಿಜಿಟಲ್ ರೂಲ್ಸ್!

ಬೆಂಗಳೂರು: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಹಣಕಾಸಿನ ವ್ಯವಹಾರ ನಡೆಸುವ ವಿಧಾನವೇ ಬದಲಾಗುವ ಸಾಧ್ಯತೆ ಇದೆ. ಭಕ್ತರಿಂದ ಸಂಗ್ರಹವಾಗುವ ಹಣದಲ್ಲಿ ಅಕ್ರಮ ನಡೆಯದಂತೆ ಹಾಗೂ ಪ್ರತಿಯೊಂದು ವಹಿವಾಟಿಗೂ ಲೆಕ್ಕವಿರುವಂತೆ ಮಾಡಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ.

ದೇವಾಲಯಗಳ ಆದಾಯ ಸಂಗ್ರಹ ಮತ್ತು ನಿರ್ವಹಣೆಯನ್ನು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಗೆ ಒಳಪಡಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ. ಈ ಕಾರ್ಯದಲ್ಲಿ ಇ-ಆಡಳಿತ ಇಲಾಖೆಯ ಸಹಕಾರ ಪಡೆಯುವಂತೆಯೂ ನಿರ್ದೇಶನ ನೀಡಲಾಗಿದೆ.

ಯಾವೆಲ್ಲ ವಹಿವಾಟು ಡಿಜಿಟಲ್?
ಹುಂಡಿ ಕಾಣಿಕೆ, ಅರ್ಚನೆ, ವಿವಿಧ ಸೇವೆಗಳ ಶುಲ್ಕ, ವಸತಿ ವ್ಯವಸ್ಥೆ, ಪಾರ್ಕಿಂಗ್, ದೇಣಿಗೆ, ಪ್ರಸಾದ ಹಾಗೂ ದೇವಾಲಯದ ಪ್ರಕಟಣೆಗಳ ಮಾರಾಟ ಸೇರಿದಂತೆ ಆದಾಯ ಬರುವ ಪ್ರತಿಯೊಂದು ವಿಭಾಗದಲ್ಲೂ ಇ-ಪಾವತಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಇನ್ನು ಕೌಂಟರ್‌ಗಳಲ್ಲಿ ಭಕ್ತರಿಗೆ ನೀಡುವ ರಶೀದಿಗಳಿಗೂ ವಿಶೇಷ ವ್ಯವಸ್ಥೆ ಇರಲಿದೆ. ಪ್ರತಿ ರಶೀದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗುತ್ತದೆ. ಭಕ್ತರು ತಮ್ಮ ಮೊಬೈಲ್ ಮೂಲಕ ಅದನ್ನು ಸ್ಕ್ಯಾನ್ ಮಾಡುವ ಮೂಲಕ ರಶೀದಿ ಅಧಿಕೃತವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗಲಿದೆ.

ಇದರ ಜೊತೆಗೆ ದೇವಾಲಯದ ಆವರಣದಲ್ಲೇ ಸ್ವಯಂ ಸೇವಾ ಡಿಜಿಟಲ್ ಪಾವತಿ ಯಂತ್ರಗಳನ್ನು ಅಳವಡಿಸುವ ಬಗ್ಗೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣಕ್ಕೆ ಕಾರಣವಾದದ್ದು ಏನು?

ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಮಹತ್ವದ ನಿರ್ದೇಶನಗಳು ಹೊರಬಂದಿವೆ. ದೇವಾಲಯದ ಐಟಿ ಆಡಳಿತಾಧಿಕಾರಿಯ ಲಾಗಿನ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ರಶೀದಿಗಳನ್ನು ಸೃಷ್ಟಿಸಿ ಹಣ ವಂಚನೆ ಮಾಡಿದ ಆರೋಪ ದ್ವಿತೀಯ ದರ್ಜೆ ಸಹಾಯಕ ರಾಜೇಶ್ ನಾಯಕ್ ವಿರುದ್ಧ ಕೇಳಿಬಂದಿತ್ತು.

ಈ ಪ್ರಕರಣದಲ್ಲಿ ರಾಜೇಶ್ ನಾಯಕ್ ಅವರನ್ನು ಸೇವೆಯಿಂದ ವಜಾಗೊಳಿಸುವ ಇಲಾಖೆಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು, ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

ನಕಲಿ ರಶೀದಿ, ಹಣದ ದುರುಪಯೋಗ ಹಾಗೂ ಲೆಕ್ಕಪತ್ರಗಳಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುವುದು ಮಾತ್ರವಲ್ಲದೆ, ದೇವಾಲಯದ ಹಣಕಾಸಿನ ಮೇಲೆ ಭಕ್ತರಿಗೆ ಹೆಚ್ಚಿನ ನಂಬಿಕೆ ಮೂಡಿಸುವುದು ಈ ಡಿಜಿಟಲ್ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.