ಶನಿವಾರ, 24 ಅಕ್ಟೋಬರ್ 2026

ಮಗ, ಪತಿ ಇಬ್ಬರೂ ನಿಧನ – ಎಸ್‌ ಜಾನಕಿ ಅಂತಿಮ ವಿಧಿವಿಧಾನ ನೆರವೇರಿಸೋದು ಯಾರು?

ಗಾನಕೋಗಿಲೆ ಎಸ್‌ ಜಾನಕಿಯವರು 88 ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ಮೃತಪಟ್ಟಿದ್ದು, ಅವರ ಅಂತಿಮ ಯಾತ್ರೆಗೆ ಸಕಲ ಸಿದ್ದತೆ ನಡೆಯುತ್ತಿದೆ. ಇನ್ನೂ ಅವರ ಪತಿ, ಏಕೈಕ ಪುತ್ರ ಇಬ್ಬರೂ ಮೃತಪಟ್ಟಿದ್ದು, ಅವರ ಅಂತಿಮ ವಿಧಿವಿಧಾನ ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡುವುದು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಭಾನುವಾರ ಸಂಜೆ ವೇಳೆಗೆ ಮೈಸೂರು ಎಚ್‌ಡಿ ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ನವೀನ್ ಫಾರಂ ಹೌಸ್‌ಗೆ ಮೃತದೇಹ ಕೊಂಡೊಯ್ಯಲಾಗುತ್ತದೆ. ಅಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇನ್ನೂ ಜಾನಕಿ ಅವರ ಪುತ್ರ ಮುರಳಿಕೃಷ್ಣ 2026 ಜನವರಿಯಲ್ಲಿ ಮೃತಪಟ್ಟಿದ್ದರು. ಪತಿಯು 1997 ರಲ್ಲಿಯೇ ತೀರಿ ಹೋಗಿದ್ದರು. ಹೀಗಾಗಿ, ಮೊಮ್ಮಗಳು (ಮಗನ ಮಗಳು) ಅಪ್ಪರಾ ಅವರು ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಅವರೇ ಚಿತೆಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಂಡ ಯಾರು?

1956ರಲ್ಲಿ ಜಾನಕಿ ತಮ್ಮ 18ನೇ ವಯಸ್ಸಿನಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾದರು. ರಾಮು ಎಂದು ಜಾನಕಿ ಪ್ರೀತಿಯಿಂದ ಕರೆಯುತ್ತಿದ್ದರು. ಪತಿ ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಜಾನಕಿಯವರ ಹೆಗಲಿಗೆ ಹೆಗಲಾಗಿ ನಿಂತಿದ್ದರು. ಈ ದಂಪತಿಗೆ ಮುರಳಿ ಕೃಷ್ಣ ಎಂಬ ಒಬ್ಬ ಮಗನಿದ್ದನು. ಇಬ್ಬರ ಜೋಡಿಯು ಸಿನಿ ರಂಗಕ್ಕೆ ಮಾದರಿಯಾಗಿತ್ತು. ಪತಿ ಸಾವಿನ ಕೊನೆಯ ದಿನದವರೆಗೂ ಒಂದಾಗಿ ಬಾಳಿ ಬದುಕಿದವರು. ರಾಮು 1997ರಲ್ಲಿ ನಿಧನರಾದರು. 

ಮಗ ಯಾರು?

ತಮಿಳು ಮತ್ತು ತೆಲುಗು ಸಿನಿಮಾಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ಅವರು ಭರತನಾಟ್ಯವನ್ನೂ ಕರಗತ ಮಾಡಿಕೊಂಡಿದ್ದರು. ಚೆನ್ನೈನ ನರ್ತಕಿ ಉಮಾ ಅವರನ್ನು ಮದುವೆಯಾಗಿದ್ದ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಕಾಲಕ್ರಮೇಣ ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ವಿಚ್ಛೇದನ ಪಡೆದು, ತಾಯಿ ಜಾನಕಿಯವರ ಜತೆಯೇ ವಾಸವಾಗಿದ್ದರು. ದುರದೃಷ್ಟವಶಾತ್, 2026 ಜನವರಿ 22 ರಂದು ದಿಢೀರನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.