ಬೆಂಗಳೂರು: ಆರ್ಎಸ್ಎಸ್ ಹಾಗೂ ಬಜರಂಗದಳದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆ ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಮತ್ತೊಂದು ರಿಲೀಫ್ ಸಿಕ್ಕಿದೆ.
ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ವಜಾಗೊಳಿಸಿದ್ದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ನೇಪಾಳದ ಪ್ರವಾಹದಿಂದ ಪಾರಾಗಿ ತವರಿಗೆ ಮರಳಿದ 54 ಕನ್ನಡಿಗರು; ‘ಆ ಅರ್ಧ ಗಂಟೆಯೇ ನಮ್ಮ ಜೀವ ಉಳಿಸಿತು’
ಏನಿದು ಪ್ರಕರಣ?
ವಿಧಾನಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ನಡೆಯುತ್ತಿರುವ ಹೆಚ್ಚಿನ ಅಪರಾಧ ಕೃತ್ಯಗಳಿಗೆ ಆರ್ಎಸ್ಎಸ್ ಮತ್ತು ಬಜರಂಗದಳ ಕಾರಣ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಕಿರಣ್ ಎಂಬುವವರು ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಪರಿಗಣಿಸುವ ಮುನ್ನ ಸಿದ್ದರಾಮಯ್ಯ ಅವರ ವಾದವನ್ನು ಆಲಿಸಲು 42ನೇ ಎಸಿಜೆಎಂ ಕೋರ್ಟ್ ಅವಕಾಶ ನೀಡಿತ್ತು. ಬಿಎನ್ಎಸ್ಎಸ್ ಸೆಕ್ಷನ್ 223ರ ಅಡಿಯಲ್ಲಿ ನೋಟಿಸ್ ಜಾರಿಯಾಗಿತ್ತು. ಸಿದ್ದರಾಮಯ್ಯ ಪರ ವಕೀಲರ ವಾದ ಆಲಿಸಿದ ಬಳಿಕ ಎಸಿಜೆಎಂ ಕೋರ್ಟ್ ಖಾಸಗಿ ದೂರನ್ನು ವಜಾಗೊಳಿಸಿತ್ತು.
ನೇಪಾಳದ ಪ್ರವಾಹದಿಂದ ಪಾರಾಗಿ ತವರಿಗೆ ಮರಳಿದ 54 ಕನ್ನಡಿಗರು; ‘ಆ ಅರ್ಧ ಗಂಟೆಯೇ ನಮ್ಮ ಜೀವ ಉಳಿಸಿತು’
ವಿಶೇಷ ಕೋರ್ಟ್ನಲ್ಲೂ ಅರ್ಜಿ ತಿರಸ್ಕಾರ
ಎಸಿಜೆಎಂ ಕೋರ್ಟ್ ಆದೇಶದಿಂದ ಅಸಮಾಧಾನಗೊಂಡ ಕಿರಣ್, ಮರುಪರಿಶೀಲನೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಅವರು, ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಗೆ ಸಂವಿಧಾನದ 194(2)ನೇ ವಿಧಿಯ ರಕ್ಷಣೆ ಇದೆ ಎಂದು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ವಿಶೇಷ ಕೋರ್ಟ್, ಕಿರಣ್ ಅವರ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ 42ನೇ ಎಸಿಜೆಎಂ ಕೋರ್ಟ್ ನೀಡಿದ್ದ ಆದೇಶವನ್ನು ವಿಶೇಷ ನ್ಯಾಯಾಲಯವೂ ಎತ್ತಿಹಿಡಿದಿದೆ.
ಸಿದ್ದರಾಮಯ್ಯ ಅವರ ಹೇಳಿಕೆ ಹೊರಬಂದ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಪ್ರಕರಣದಲ್ಲಿ ಮರುಪರಿಶೀಲನಾ ಅರ್ಜಿಯೂ ವಜಾಗೊಂಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

