SDM ಸ್ವಾಯತ್ತೆ ಕಾಲೇಜು ವಿದ್ಯಾರ್ಥಿಗಳಿಂದ ಪ್ರಾಯೋಗಿಕ ‘ ಮಾದರಿ 22 2025-26’-ಸದನ ಮಾದರಿಯಲ್ಲೇ ಅಲಂಕಾರಗೊಂಡ ಸಭಾಂಗಣ
ಉಜಿರೆ,ದಿ.ಮಾ.03 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾಯೋಗಿಕ ‘ ಮಾದರಿ ಸಂಸತ್ತು 2025 -26’ ವಿಶೇಷ ಕಾರ್ಯಕ್ರಮವು ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ನಡೆಯಿತು.
Sponsoredಮಾದರಿ ಸಂಸತ್ತು ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಸುದ್ದಿ ಬಿಡುಗಡೆ ಮಿಡಿಯಾ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವ ಶರ್ಮಾ ನಿಡ್ಲೆ ಉಪಸ್ಥಿತರಿದ್ದರು.
ಕಲಾಪವನ್ನು ವೀಕ್ಷಿಸಿ ಬಳಿಕ ಮಾತನಾಡಿದ ಇವರು, ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನ ಸೇರಿದಂತೆ ಪ್ರಸ್ತುತ ವಿದ್ಯಮಾನಗಳ ಕುರಿತಾದ ಚರ್ಚೆ, ಅರಿವು ಹಾಗು ಅಭಿಪ್ರಾಯಗಳು ಬಹು ಮುಖ್ಯ. ಇಂತಹ ಚರ್ಚೆಗಳು ವಿದ್ಯಾರ್ಥಿ ಜೀವನದಿಂದಲೇ ಆರಂಭವಾದಾಗ ಯುವ ಸಮುದಾಯ ವೈಚಾರಿಕ ಪ್ರಬುದ್ಧತೆಯನ್ನು ಹೊಂದುವುದರ ಜೊತೆಗೆ ದೇಶ ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ. ದೇಶವನ್ನು ಸುಭದ್ರತೆ ಮತ್ತು ಸುವ್ಯವಸ್ಥೆ ಯಿಂದ ನೋಡಿಕೊಳ್ಳುವ ಜವಾಬ್ದಾರಿಯುತ ಜನ ನಾಯಕರನ್ನು ಆಯ್ಕೆಮಾಡಲು ಹಾಗು ನಾಡಿನಾದ್ಯಂತ ಯುವ ನಾಯಕರು ತಯಾರಾಗಲು ಇಂತಹ ವೇದಿಕೆಗಳು ಪ್ರೇರಣೆಯಾಗುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಜಕೀಯ ಮತ್ತು ಕಾನೂನಿನ ಅರಿವಿನೊಂದಿಗೆ ನಡೆದರೆ ಮಾತ್ರ ಹೊಸ ಯೋಜನೆ, ನಾಡಿನ ಜ್ವಲಂತ ಸಮಸ್ಯೆ, ಮೂಲ ಭೂತ ಸೌಕರ್ಯ, ಶಿಕ್ಷಣ, ಉದ್ಯೋಗ ಇತ್ಯಾದಿ ವಿಷಯಗಳನ್ನು ಚರ್ಚಿಸಿ ಪರಿಹಾರೋಪಾಯ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯ ವಾಗುತ್ತದೆ. ವಿದ್ಯಾರ್ಥಿಗಳು ಸದಾ ದಿನಪತ್ರಿಕೆ ಹಾಗು ನಿಯತಕಾಲಿಕೆಗಳನ್ನು ಓದುವ ಜೊತೆಗೆ ಸಮಾಜದ ಆಗುಹೋಗುಗಳ ಕಡೆ ಗಮನ ನೀಡಬೇಕು ಎಂದು ವಿದ್ಯಾರ್ಥಿಗಳು ಸದನದಲ್ಲಿ ಅನೇಕ ಪ್ರಸ್ತುತ ವಿಚಾರಗಳ ಮಂಡನೆ ಮತ್ತು ಚರ್ಚೆಯನ್ನು ಆಲಿಸಿ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಳಿಕ ತನ್ನ ಮಾಧ್ಯಮ ವೃತ್ತಿಯ ದಶಕಗಳಿಗೂ ಅಧಿಕ ಸಮಯವನ್ನು ದೆಹಲಿಯಲ್ಲಿ ಕಳೆದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವಲ್ಲಿ ಕಾಲೇಜು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಾದರಿ ಸಂಸತ್ತು ವಿದ್ಯಾರ್ಥಿಗಳಿಗೆ ಶಾಸಕಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆಗಳ ಅರಿವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹಾಗು ವಿದ್ಯಾರ್ಥಿಗಳು ಶಾಸಕಾಂಗ ವ್ಯವಸ್ಥೆಹೊಳ ಪ್ರವೇಶಿಸಲು ಅಡಿಪಾಯವನ್ನು ರೂಪಿಸುತ್ತದೆ. ಜವಾಬ್ದಾರಿಯುತ ನಾಯಕರಿಂದ ಉತ್ತಮ ಆಡಳಿತ ಈ ದೇಶದಲ್ಲಿ ನಿರಂತರವಾಗಿ ನಡೆದಾಗ ಮಾತ್ರ ಸುಭದ್ರ ಮತ್ತು ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಕ್ಕೆ ಅಭಿನಂದಿಸಿದರು.
ಮಾದರಿ ಸಂಸತ್ತು ಪ್ರಾಯೋಗಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಸ್ಪೀಕರ್, ಮಾರ್ಷಲ್ಸ್, ವಿರೋಧ ಪಕ್ಷದ ನಾಯಕ, ಸಚಿವರು, ಆಡಳಿತ ಪಕ್ಷದ ನಾಯಕ ಇತ್ಯಾದಿ ಪಾತ್ರಗಳನ್ನು ನಿರ್ವಹಿಸಿದರು. ಸದನದಲ್ಲಿ ವಿದ್ಯಾರ್ಥಿಗಳು ವಿಶೇಷ ಉಡುಗೆ ತೊಟ್ಟು ಕಲಾಪ ವೀಕ್ಷಿಸಲು ಬಂದಿದ್ದ ಅಂತಾರಾಷ್ಟ್ರೀಯ ಮೂರು ಜನ ಗಣ್ಯರು ಎಲ್ಲರ ಗಮನ ಸೆಳೆದರು. ಕಾಲೇಜಿನ ಸಭಾಂಗಣವನ್ನು ಸದನದ ಮಾದರಿಯಲ್ಲೇ ಆಸನಗಳ ವ್ಯವಸ್ಥೆ ಮಾಡಿ ಅಲಂಕರಿಸಲಾಗಿತ್ತು.ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ ಸೇರಿದಂತೆ ವಿಭಾಗದ ಮುಖ್ಯಸ್ಥ ನಟರಾಜ್, ಉಪನ್ಯಾಸಕರಾದ ಡಾ. ಶಿವಕುಮಾರ್ ಮತ್ತು ಭಾಗ್ಯಶ್ರೀ ಉಪಸ್ಥಿತರಿದ್ದರು.
ಸದನ ವೀಕ್ಷಣೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭವ್ಯ ವಂದಿಸಿ, ಕುಮಾರಿ ವೀಕ್ಷಾ ನಿರೂಪಿಸಿದರು.
ಮಾದರಿ ಸಂಸತ್ತು ವಿಶೇಷ ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥ ನಟರಾಜ್ ಸಂಯೋಜಿಸಿದರು.




