ಪುತ್ತೂರು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಾಶಿವ ಭಟ್ಟ ಪಳ್ಳು ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾ ತಮ್ಮ ಸುಧೀರ್ಘ ಬದುಕಿನಲ್ಲಿ ಯಕ್ಷಗಾನ ಪ್ರಸಂಗವನ್ನು ಹನ್ನೆರಡು ಭಾಷೆಗಳಲ್ಲಿ ರಚಿಸಿರುವುದು ನಿಜಕ್ಕೂ ಶ್ಲಾಘನೀಯ. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಕೃತಿಗಳು ಎಂದೆAದಿಗೂ ಜನಪ್ರಿಯವಾಗಿರುತ್ತವೆ. ಭಗೀರಥನ ಕಥೆ ಮತ್ತು ಸತ್ಯವನಸಾವಿತ್ರಿಯ ಕಥೆಯನ್ನು ನೆನಪು ಮಾಡಿಕೊಂಡಾಗ “ಋಣಮುಕ್ತಿ – ಅಮೃತತ್ವದೆಡೆಗೆ ಗೀತರೂಪಕಗಳು” ಎಂಬ ಕೃತಿಗೆ ಹೆಸರು ಬರಲು ಕಾರಣವಾಯಿತು ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ್ ಚಂದ್ರಗಿರಿ ಹೇಳಿದರು.
Sponsoredಇವರು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ. ಕೆ. ಶಿವರಾಮಕಾರಂತ ಅಧ್ಯಯನ ಕೇಂದ್ರ, ಸೌರಭ ಪ್ರಸಾರಂಗ ಮತ್ತು ಐಕ್ಯೂಎಸಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಾಲಯ ಬೆಟ್ಟಂಪಾಡಿ ಆಯೋಜಿಸಿದ ಡಾ. ಡಿ. ಸದಾಶಿವ ಭಟ್ಟ ಪಳ್ಳುಮನೆ ಅವರ ‘ಋಣಮುಕ್ತಿ ಮತ್ತು ಅಮೃತತ್ವದೆಡೆಗೆ’ ಗೀತರೂಪಕಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಕೃತಿಕಾರ ಸದಾಶಿವ ಭಟ್ಟ ಪಳ್ಳು ಮಾತನಾಡಿ, ಡಾ. ವರದರಾಜ್ ಚಂದ್ರಗಿರಿ ಅವರು ನನ್ನ ಗುರುಗಳಿದ್ದಂತೆ. ಅವರಿಂದ ನನ್ನ ಕೃತಿ ಲೋಕಾರ್ಪಣೆ ಹೊಂದಿರುವುದು ನನಗೆ ಸಂತೋಷದ ಸಂಗತಿ. ಜೊತೆಗೆ ಈ ಕೃತಿ ಲೋಕಾರ್ಪಣೆಯಲ್ಲಿ ಸಹಕರಿಸಿದ ವಿವೇಕಾನಂದ ವಿದ್ಯಾಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. ಯಾವುದೇ ಕೆಲಸ ಮಾಡಲು ಕಾಲ ಕೂಡಿ ಬರಬೇಕು ಎಂಬ ಮಾತಿನಂತೆ ಋಣಮುಕ್ತಿ ಮತ್ತು ಅಮೃತತ್ವದೆಡೆಗೆ ಗೀತ ರೂಪಕಗಳು ಪುಸ್ತಕ ರೂಪಕ್ಕೆ ಮೂಡಿ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಡಾ.ಡಿ. ಸದಾಶಿವ ಭಟ್ಟ ಪಳ್ಳು ಅವರು ಜೀವನದಲ್ಲಿ ಅಳಡಿಸಿಕೊಂಡ ಶಿಸ್ತು ಅವರ ಬರವಣಿಗೆಯಲ್ಲಿ ಪ್ರತಿಬಿಂಬಿಸುತ್ತದೆ. ಅಂತಹ ಶಿಸ್ತುಬದ್ಧ ಜೀವನ ರೂಡಿಸಿಕೊಂಡವರು ಮಾತ್ರ ಸಾಹಿತ್ಯದ ಪಾಂಡಿತ್ಯ ಹೊಂದಲು ಸಾಧ್ಯ. ವಿವೇಕಾನಂದ ವಿದ್ಯಾಸಂಸ್ಥೆಯ ಸೌರಭ ಪ್ರಸಾರಾಂಗ ಸದಾ ಬರಹಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಮುಂಚೂನಿಯಲ್ಲಿರುತ್ತದೆ. ಸಂಸ್ಥೆ ಸದಾ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಸಮಾಜದ ಜೊತೆಗೆ ಉತ್ತಮ ಸಂಬAಧವನ್ನು ಈ ಸಂಸ್ಥೆ ಹೊಂದಿದೆ ಎಂದರು.
ವಿವೇಕಾನoದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ದೇವಸ್ಥಾನದ ಅನುವಂಶಿಕ ಮುಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಮತ್ತು ಮುಕ್ತೇಸರ ವಿನೋದ್ ಕುಮಾರ್ ರೈ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಗೌರವಾಧ್ಯಕ್ಷ ಸಂಜೀವ ರೈ, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿ, ಸೌರಭಪ್ರಸಾರಂಗ ನಿರ್ದೇಶಕ ಡಾ. ಮನಮೋಹನ್ ಎಮ್ ವಂದಿಸಿ, ವಿವೇಕಾನಂದ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ಧನ್ಯಶ್ರೀ ದಾಮೋಧರ ಮತ್ತು ಗ್ರೀಷ್ಮಾ ಪಾಣಾಜೆ ನಿರೂಪಿಸಿದರು.




