ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ನಿವಾಸದ ಬಳಿ ನಡೆಸಿದ ಪ್ರತಿಭಟನೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಈ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರಾಹುಲ್ ಗಾಂಧಿ ಗಾಯಗೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Sponsoredರಾಹುಲ್ ಅವರ ಮೂಗಿನಿಂದ ರಕ್ತಸ್ರಾವವಾಗಿರುವುದು ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿರುವುದು ಕಾಣಿಸುವ ಫೋಟೋಗಳನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಸೇರಿದಂತೆ ನಾಯಕರನ್ನು ತೆರವುಗೊಳಿಸಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದರು. ಈ ವೇಳೆ ರಾಹುಲ್ ಗಾಂಧಿ ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ಮುಂದುವರಿಸಿದ್ದು, ಬಳಿಕ ಪೊಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದರು. ಬಲವಂತದಿಂದ ಕರೆದೊಯುವ ವೇಳೆ ಗಾಯಗಳಾಗಿವೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಇನ್ನೂ ಬಂಧನಕ್ಕೊಳಗಾಗುವ ಮೊದಲು ರಾಹುಲ್ ಗಾಂಧಿ, “ವಿದ್ಯಾರ್ಥಿಗಳ ಮೇಲಿನ ದಾಳಿ ಎಂದರೆ ಪ್ರತಿಯೊಂದು ಭಾರತೀಯ ಕುಟುಂಬದ ಮೇಲಿನ ದಾಳಿ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಆರೋಪಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.




