ಬೈಕಂಪಾಡಿಯಲ್ಲಿರುವ ಮಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಕಚೇರಿಗೆ ಲಗ್ಗೆ ಇಟ್ಟು ಕಾರ್ಯದರ್ಶಿ ಸಿ.ಹೆಚ್. ಮೋಹನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕಳೆದ ಎರಡೂವರೆ ವರ್ಷಗಳಿಂದ ₹15,000 ವೇತನಕ್ಕೆ ದುಡಿಯುತ್ತಿರುವ ಇಬ್ಬರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆಗೆ, ತನ್ನ ಲೈಂಗಿಕ ಬೇಡಿಕೆಗೆ ಒಪ್ಪಿದರೆ ವೇತನವನ್ನು ₹25,000ಕ್ಕೆ ಏರಿಸುವುದಾಗಿ ಮೋಹನ್ ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಕಚೇರಿ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಕೆಲಸಕ್ಕೆ ಹಾಕಲಾಗಿತ್ತು. ಕಳೆದ ಶನಿವಾರ ಕರೆ ಮಾಡಿದ್ದ ಅಧಿಕಾರಿಯು, ತನ್ನ ಬೇಡಿಕೆಗೆ ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಉಟ್ಟು ಬರಬೇಕೆಂದು ಷರತ್ತು ವಿಧಿಸಿದ್ದ ಎಂದು ಆರೋಪಿಸಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ ಹಲವು ಮಹಿಳೆಯರು ಹಸಿರು ಸೀರೆ ಧರಿಸಿ ‘ಗ್ರೀನ್ ಗ್ಯಾಂಗ್’ ಆಗಿ ಎಪಿಎಂಸಿ ಕಚೇರಿಗೆ ದಿಢೀರ್ ದಾಳಿ ನಡೆಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ತಾನೇನು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ ಅಧಿಕಾರಿಗೆ ಮಹಿಳೆಯರು ತಪರಾಕಿ ನೀಡಿ, “ನಿನ್ನ ಜೇಬಿನಿಂದ ಸಂಬಳ ನೀಡುತ್ತಿದ್ದೀಯಾ?” ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಣಂಬೂರು ಠಾಣಾ ಉಪನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಬಳಿಕ ಸಂತ್ರಸ್ತೆ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲೇ ಆಕೆಗೆ ರಕ್ಷಣೆ ಸಿಗಬೇಕು. ಕಂಪ್ಲೇಂಟ್ ನೀಡಿದ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರತಿಭಾ ಕುಳಾಯಿ ಎಪಿಎಂಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್, ಸಂತ್ರಸ್ತೆಯಿಂದ ದೂರು ಪಡೆದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.



