ಮನೆಯಿಂದ ದಿನಸಿ ಸಾಮಾನುಗಳನ್ನು ತರಲು ತೆರಳಿದ್ದ ಯುವ ಶೂಟರ್ ದಮಯಂತಿ ಸೇನ್ (15) ನಾಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದೆ.
Sponsoredಜು.16ರ ಮಧ್ಯಾಹ್ನ ಅವರು ಕಾಣೆಯಾಗಿದ್ದಾರೆ. ಅವರು ಮನೆಯಿಂದ ದಿನಸಿ ತರಲು ತೆರಳಿದ್ದವರು ವಾಪಸ್ ಆಗಿರಲಿಲ್ಲ. ಅವರ ಸ್ನೇಹಿತರು, ಶೂಟಿಂಗ್ ಸಹಚರರು ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿದ್ದು, ಯಾವುದೇ ಮಾಹಿತಿ ಸಿಕ್ಕಿಲ್ಲ. ಬಳಿಕ ಅವರ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಪೋಷಕರು ನೀಡಿದ ದೂರಿನ ಬೆನ್ನಲ್ಲೇ ಪೊಲೀಸರು ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದಮಯಂತಿ ಸೇನ್ ಕೊನೆಯದಾಗಿ ಹೌರ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಕೆ ನಾಲ್ಕು ಮತ್ತು ಐದನೇ ಪ್ಲಾಟ್ಫಾರ್ಮ್ಗಳ ನಡುವೆ ಚಲಿಸುತ್ತಿರುವುದು ಸೆರೆಯಾಗಿದೆ.
ದಮಯಂತಿ ಸೇನ್ ರಾಷ್ಟ್ರೀಯ ತಂಡದ ಟ್ರಯಲ್ಸ್ಗೆ ಆಯ್ಕೆಯಾಗಿದ್ದಳು. ಟ್ರಯಲ್ಸ್ ನಡೆಯುತ್ತಿದ್ದ ನಡುವೆ ದಮಯಂತಿ ನಾಪತ್ತೆ ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಇತ್ತ ಪೋಷಕರು ಆತಂಕಗೊಂಡಿದ್ದು, ಮಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.




