Home » ಮಕ್ಕಳ ಅಂಕಗಳಷ್ಟೇ ಅಲ್ಲ, ನಡವಳಿಕೆಯ ಮೇಲೂ ಗಮನಹರಿಸಿ: ಶಿಕ್ಷಕರಿಗೆ ಮೋದಿ ಕರೆ

ಮಕ್ಕಳ ಅಂಕಗಳಷ್ಟೇ ಅಲ್ಲ, ನಡವಳಿಕೆಯ ಮೇಲೂ ಗಮನಹರಿಸಿ: ಶಿಕ್ಷಕರಿಗೆ ಮೋದಿ ಕರೆ

0 comments

ನವದೆಹಲಿ:ಶಿಕ್ಷಕರು ಪಾಠ ಮತ್ತು ಪರೀಕ್ಷಾ ಅಂಕಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಹಾಗೂ ನಡವಳಿಕೆಯ ಮೇಲೂ ವಿಶೇಷ ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ 82 ಶಿಕ್ಷಕರೊಂದಿಗೆ ಸಂವಾದ ನಡೆಸಿದ ಮೋದಿ, ವಿದ್ಯಾರ್ಥಿಗಳ ವರ್ತನೆಯಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ ಶಿಕ್ಷಕರು ಅದನ್ನು ನಿರ್ಲಕ್ಷಿಸಬಾರದು ಎಂದರು. ಮಕ್ಕಳು ಸ್ನೇಹಿತರಿಂದ ದೂರವಾಗುವುದು ಅಥವಾ ಮಾದಕ ವ್ಯಸನದಂತಹ ದುಶ್ಚಟಗಳತ್ತ ಆಕರ್ಷಿತರಾಗುವ ಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸ್ಕ್ರೀನ್ ಬಳಕೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ಕ್ರೀಡೆ, ಸೃಜನಶೀಲ ಚಟುವಟಿಕೆಗಳು ಮತ್ತು ಇತರ ಆಸಕ್ತಿದಾಯಕ ಕಾರ್ಯಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಶಿಕ್ಷಕರಿಗೆ ಸೂಚಿಸಿದರು.
ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಪ್ರತಿಭೆ ಗುರುತಿಸುವುದು ಹಾಗೂ ಅವರ ಮುಗ್ಧ ಬಾಲ್ಯವನ್ನು ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮೋದಿ ಹೇಳಿದರು.

You may also like