ಸೋಮವಾರ, 26 ಅಕ್ಟೋಬರ್ 2026
Trending

ಕಣ್ಣೀರು ಹಾಕುತ್ತ ರಾಜೀನಾಮೆ ಘೋಷಿಸಿದ ಸಚಿವ ಬಿ ನಾಗೇಂದ್ರ!!

ಸಿಎಂ ಡಿ.ಕೆ.ಶಿವಕುಮಾರ್‌ ಸಂಪುಟದ ಮೊದಲ ವಿಕೆಟ್‌ ಉರುಳಿಬಿದ್ದಿದೆ. ಕಣ್ಣೀರಿಟ್ಟು ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

Sponsored

ವಾಲ್ಮೀಕಿ ನಿಗಮ ಹಗರಣದ ವಿರುದ್ಧ ನಡೆದ ಹೋರಾಟದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಕ್ಕೆ ಮಹತ್ವದ ಜಯ ಸಿಕ್ಕಿದ್ದು, ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಬಿ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದೆಹಲಿಯಿಂದ ವಾಪಾಸಾದ ಬಳಿಕ ವಿಧಾನಸೌಧದಲ್ಲಿ ನಡೆದ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ, ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಘೋಷಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗೇಂದ್ರ, ಸದನ ನಡೆಯೋಕೆ ವಿಪಕ್ಷಗಳು ಬಿಡಲಿಲ್ಲ. ಸದನವನ್ನು ಹಾಳು ಮಾಡಿದರು. ಸಂವಿಧಾನ ವಿರೋಧಿಗಳು ವಿಪಕ್ಷಗಳು. ವಿಪಕ್ಷಗಳು ಈಗಲೂ ಮನುಸ್ಮೃತಿ ಜಾರಿಗೆ ಪ್ರಯತ್ನ ಮಾಡ್ತಾ ಇದ್ದಾರೆ. ಇದು ವೇದ ಕಾಲ ಅಲ್ಲ. ಪುರಾಣ ಕಾಲ ಅಲ್ಲ. ಸಂವಿಧಾನ ಕಾಲ, ಅಂಬೇಡ್ಕರ್ ಯುಗ ಇದು. ಉತ್ತರಕಾಂಡದಲ್ಲಿ ಶಂಭುಕ ಹತ್ಯೆಯಾಯ್ತು. ಇವತ್ತು ಶಂಭುಕ ಹತ್ಯೆ ಆಗಲ್ಲ. ರಕ್ಷಣೆಗೆ ಸಂವಿಧಾನ ಇದೆ. ಮನುಸ್ಮೃತಿಗಳು ಶಂಭುಕ ಹತ್ಯೆ ಮಾಡಿದ ರೀತಿ ಆಗಲ್ಲ. ದಲಿತರು, ಕ್ಷುದ್ರರು, ಆದಿವಾಸಿಗಳು, ಅಲ್ಪಸಂಖ್ಯಾತರು ಬದುಕ ಬಾರದು ಅನ್ನೋದು ಮನುಸ್ಮೃತಿ ಬಿಜೆಪಿ ಅವರ ಮನಸ್ಥಿತಿ. ಆದರೆ, ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಅಲ್ಲದೆ ನನಗೊಂದು ಅವಕಾಶ ನೀಡಿ. ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆಗೆ ಸಿದ್ದ. ಬನ್ನಿ ಅಖಾಡಕ್ಕೆ ಹೋಗೋಣ. ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ನಿಮಗೆ ತಾಕತ್ತಿದ್ದರೆ ಚುನಾವಣೆ ಎದುರಿಸೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ನಾನು ತಪ್ಪು ಮಾಡಿದರೆ ನಾನು ಚುನಾವಣೆಯಲ್ಲಿ ಸೋಲುತ್ತೇನೆ ಎಂದರು.

ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಬಿ ನಾಗೇಂದ್ರ ಭಾವುಕರಾಗಿ ಕಣ್ಣೀರು ಹಾಕಿದರು. ನಾನು ನಿರಪರಾಧಿ. ನನ್ನಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಬಾರದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದರು.