ಶನಿವಾರ, 24 ಅಕ್ಟೋಬರ್ 2026

Mangaluru : ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ

Mangaluru : ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯ 10 ನೇ ಮೈಲ್‌ ಕಲ್ಲಿನ ಬಳಿ ನೇತ್ರಾವತಿ ನದಿಯ ದಡದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆಯಾಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಅನುಮಾನ , ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಮಂಗಳವಾರ ಸಂಜೆ, ಸ್ಥಳೀಯ ನಿವಾಸಿಯೊಬ್ಬರು ನದಿ ದಂಡೆಯಲ್ಲಿ ನೀರಿನಲ್ಲಿ ಹಲವಾರು ಆಧಾರ್ ಕಾರ್ಡ್‌ಗಳು ತೇಲುತ್ತಿರುವುದನ್ನು ಕಂಡು ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದು, ಆಧಾರ್ ಕಾರ್ಡ್‌ಗಳು ಪುದು ಗ್ರಾಮದ ನಿವಾಸಿಗಳ ವಿಳಾಸಗಳನ್ನು ಹೊಂದಿರುವುದು ಕಂಡುಬಂದಿದೆ. ಈಗ ಅಧಿಕೃತ ದಾಖಲೆಗಳು ನದಿಗೆ ಹೇಗೆ ಬಂದವು ಎಂಬ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರು, ಅನೇಕ ಗ್ರಾಮಸ್ಥರು ತಮ್ಮ ಆಧಾರ್ ಕಾರ್ಡ್‌ಗಳ ತಿದ್ದುಪಡಿ ಮತ್ತು ನವೀಕರಣಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪರಿಷ್ಕೃತ ಕಾರ್ಡ್‌ಗಳು ಅಂಚೆ ಮೂಲಕ ಬರುತ್ತದೆ ಎಂದು ಕಾದು ಬಳಿಕ ಕಾರ್ಡ್‌ಗಳು ವಿಳಂಬವಾದ ಕಾರಣ, ಹಲವು ನಿವಾಸಿಗಳು ತಮ್ಮ ತಕ್ಷಣದ ಅಗತ್ಯಗಳಿಗಾಗಿ ಸೈಬರ್ ಕೇಂದ್ರಗಳಿಂದ ಪ್ರತಿಯನ್ನು ತೆಗೆದುಕೊಂಡಿದ್ದಾರೆ. ಆಧಾರ್ ಕಾರ್ಡ್‌ಗಳು ಬಂದಿದ್ದರೂ, ಅವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿಲ್ಲ ಮತ್ತು ಬದಲಾಗಿ ಎಸೆಯಲಾಗಿದೆ ಎಂದು ಪರೋಕ್ಷವಾಗಿ ಅಂಚೆ ಇಲಾಖೆ ವಿರುದ್ದ ಆರೋಪಿಸಿದ್ದಾರೆ.

ಇನ್ನು ಈ ಕುರಿತು ಸ್ಥಳೀಯ ಶಾಸಕರಾದ ತನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಧಾರ್ ಕಾರ್ಡ್ ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು, ಇದಕ್ಕೆ ಕಾರಣರಾದವರು ಯಾರು ಎಂಬುದನ್ನು ತನಿಖೆ ನಡೆಸಿ, ಪತ್ತೆ ಹಚ್ಚಿ, ತಮ್ಮ ಇಲಾಖೆ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸ್ಪೀಕರ್​ ಯು.ಟಿ. ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.