Home » ಮಂಗಳೂರು : KFC ಮೇಲೆ ಅಧಿಕಾರಿಗಳ ದಾಳಿ – 4 ತಿಂಗಳಷ್ಟು ಹಿಂದನ ಕೋಳಿ ಮಾಂಸ ಪತ್ತೆ!!

ಮಂಗಳೂರು : KFC ಮೇಲೆ ಅಧಿಕಾರಿಗಳ ದಾಳಿ – 4 ತಿಂಗಳಷ್ಟು ಹಿಂದನ ಕೋಳಿ ಮಾಂಸ ಪತ್ತೆ!!

0 comments

ಆರ್ಡರ್ ಮಾಡಿದ್ದ ಚಿಕನ್ ಸಂಪೂರ್ಣ ಹಾಳಾಗಿದ್ದು, ಕೆಟ್ಟ ವಾಸನೆ ಬರುತ್ತಿದೆ ಎಂಬ ಗ್ರಾಹಕರ ದೂರಿನ ಮೇರೆಗೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ಕೆಎಫ್‌ಸಿ (KFC) ಔಟ್‌ಲೆಟ್‌ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಆಗಸ್ಟ್ 15ರಂದು ಗ್ರಾಹಕರೊಬ್ಬರು ಈ KFC ಯಿಂದ ಆನ್‌ಲೈನ್ ಮೂಲಕ ‘ಪೆರಿ ಪೆರಿ ಚಿಕನ್’ ತರಿಸಿಕೊಂಡಿದ್ದರು. ಆದರೆ, ಆ ಚಿಕನ್‌ನಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಕಾರಣ ಸೇವಿಸಲು ಆಗುತ್ತಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಆಹಾರ ಸುರಕ್ಷತಾ ಇಲಾಖೆಗೆ ತುರ್ತು ದೂರು ನೀಡಿ, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್. ನೇತೃತ್ವದ ಅಧಿಕಾರಿಗಳ ತಂಡ ಅಡುಗೆ ಕೋಣೆ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಚಿಕನ್ ಬೇಯಿಸಲು ಬಳಸುವ ಎಣ್ಣೆಯ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಿದೆ. 

ತಪಾಸಣೆಯ ವೇಳೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸ ಪತ್ತೆಯಾಗಿದೆ. ಫ್ರೋಜನ್ ಚಿಕನ್ (Frozen Chicken) ತಿಂಗಳುಗಟ್ಟಲೆ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು ಕೆಎಫ್‌ಸಿ ಸಿಬ್ಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಅಧಿಕಾರಿಗಳು ಕೆಎಫ್‌ಸಿ ಮಳಿಗೆಯ ಗೋಡೌನ್ ಸೀಜ್ ಮಾಡಿದ್ದು, ಸ್ಥಳದಿಂದ 3 ಬಗೆಯ ಚಿಕನ್ ಸ್ಯಾಂಪಲ್‌ಗಳು ಹಾಗೂ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ.ತಿಮ್ಮಯ್ಯ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ವಚ್ಛತೆ ಕಾಪಾಡಲು ಮಳಿಗೆಗೆ ನೊಟೀಸ್ ಜಾರಿ ಮಾಡಲಾಗುತ್ತಿದ್ದು, ಲ್ಯಾಬ್ ವರದಿ ಬಂದ ಬಳಿಕ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಾನೂನು ಪ್ರಕರಣ ದಾಖಲಿಸಲಾಗುವುದು” ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಸದ್ಯ ಮಳಿಗೆಯನ್ನು ಬಂದ್ ಮಾಡಲು, ಎಲ್ಲಾ ಉತ್ಪನ್ನಗಳನ್ನು ತೆರವು ಮಾಡಿ ಶುಚಿಗೊಳಿಸಲು ಸೂಚಿಸಲಾಗಿದೆ. ಲ್ಯಾಬೋರೇಟರಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ತಿಳಿಸಿದ್ದಾರೆ.

You may also like