ಕುಂದಾಪುರ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ರಿಚರ್ಡ್ ಮಸ್ಕರೇನಸ್ ಅವರನ್ನು ಬಂದೂಕಿನಿಂದ ಶೂಟ್ ಮಾಡಿ ಹತ್ಯೆಗೈದು ಪರಾರಿಯಾಗಿದ್ದ ಕೊಲೆ ಆರೋಪಿ ಡೆರಿಕ್ ಕ್ರಾಸ್ತಾನನ್ನು (54) ಉಡುಪಿ ಜಿಲ್ಲಾ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ.
ಶೂಟ್ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಅರೆಸ್ಟ್ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಂ ಶಂಕರ್ ಅವರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಹೇರಬುಡಿಕೆ ಪ್ರದೇಶದಲ್ಲಿ ಅಡಗಿಕೊಂಡಿದ್ದ ಆರೋಪಿ ಡೆರಿಕ್ ಕ್ರಾಸ್ತಾನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ಕಸ್ಟಡಿಗೆ ಪಡೆಯಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.



