ಸೋಮವಾರ, 26 ಅಕ್ಟೋಬರ್ 2026
Trending

ಮೊಬೈಲ್ ಟಾರ್ಚ್ ಬೆಳಕಲ್ಲಿ‌ KSRTC ಬಸ್ ಚಾಲನೆ!!

ಚಿಂಚೋಳಿ ಘಟಕದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಮೊಬೈಲ್‌ ಟಾರ್ಚ್ ಬೆಳಕಿನಲ್ಲಿ ಓಡಿಸುತ್ತಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Sponsored

ಕಲಬುರಗಿಯಿಂದ ಚಿಂಚೋಳಿಗೆ ಬರುವ ಬಸ್ಸಿನ‌ ಹೆಡ್‌ಲೈಟ್‌ನ‌ ಮಂದವಾಗಿತ್ತು. ಹೀಗಾಗಿ ಆ ಲೈಟ್ ಸಾಲುವುದಿಲ್ಲ ಎಂದು ಮೊಬೈಲ್‌ ಟಾರ್ಚ್‌ ಹಾಕಿ‌ಕೊಂಡು ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್‌ ತಡರಾತ್ರಿ ಚಿಂಚೋಳಿ ತಲುಪಿದೆ. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್‌ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

‘ಕಲಬುರಗಿಯಿಂದ ಚಿಂಚೋಳಿಗೆ ಬರುವ ಲಾಸ್ಟ್‌ ಬಸ್ಸಿನ ಲೈಟ್‌ ಮಂದವಾಗಿ ಬೆಳಗುತ್ತಿರುವುದರಿಂದ ನಿರ್ವಾಹಕನ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ‌ ಚಿಂಚೋಳಿಗೆ ಬಸ್‌ ಓಡಿಸಿಕೊಂಡು ಬರುತ್ತಿರುವುದು‌ ಗಮನಕ್ಕೆ ಬಂದಿದೆ. ಬಸ್ಸಿನ ಹೆಡ್‌ಲೈಟ್‌ ತಂತಿಗಳ ಜೋಡಣೆಯಲ್ಲಿ ದೋಷವಿತ್ತು. ಸರಿಪಡಿಸಿ‌ದ್ದೇವೆ. ಆದರೆ, ಶನಿವಾರ ಲೈಟ್‌ಗಳು ಬೆಳಗದೇ ಇರುವ ಕುರಿತು ಪ್ರಯಾಣಿಕ‌ರೇ ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡಿ ಸಂಸ್ಥೆಯ ಉನ್ನತ ಅಧಿಕಾರಿಗಳು‌ ನನ್ನೊಂದಿಗೆ ಮಾತನಾಡಿದ್ದಾರೆ. ನಾಳೆಯಿಂದ ಈ ಬಸ್‌ ಬದಲಿಸಿ‌ ಬೇರೆ ಬಸ್‌ ಹಾಕುತ್ತೇನೆ’ ಎಂದು ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಪ್ರತಿಕ್ರಿಯಿಸಿದ್ದಾರೆ.