ಕೋಲಾರ: ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ವೈರಲ್ ಜ್ವರ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಳೆದ ಆರು ತಿಂಗಳಲ್ಲಿ 2,010 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 56 ತೀವ್ರ ಉಸಿರಾಟದ ಸೋಂಕು ಹಾಗೂ 16 H1N1 ಪ್ರಕರಣಗಳು ದೃಢಪಟ್ಟಿವೆ.
ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ಸೋಂಕಿತರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಐಸೋಲೇಶನ್ ವಾರ್ಡ್ಗಳು, ರ್ಯಾಪಿಡ್ ರೆಸ್ಪಾನ್ಸ್ ಬೆಡ್ಗಳು ಹಾಗೂ 12 ಹಾಸಿಗೆಗಳ ವಿಶೇಷ ವಾರ್ಡ್ನ್ನು ಸಿದ್ಧಪಡಿಸಲಾಗಿದೆ.
ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಜೊತೆಗೆ H1N1 ಚಿಕಿತ್ಸೆಯಲ್ಲಿ ಬಳಸುವ ಓಸೆಲ್ಟಾಮಿವಿರ್ ಮಾತ್ರೆಗಳನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರು ಆಸ್ಪತ್ರೆಯಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ
ಕೋಲಾರ ಜಿಲ್ಲೆಯಲ್ಲಿ ಸದ್ಯ ಆತಂಕಪಡುವಂತಹ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶರೀಫ್ ತಿಳಿಸಿದ್ದಾರೆ. ಸಾರ್ವಜನಿಕರು ಸ್ವಚ್ಛತೆ ಹಾಗೂ ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಜ್ವರ ಕಾಣಿಸಿಕೊಂಡವರು ಮನೆಯಲ್ಲೇ ಇತರರಿಂದ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಆಗಾಗ ತೊಳೆಯುವುದು ಹಾಗೂ ಸಾಕಷ್ಟು ನೀರು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಜ್ವರ ಅಥವಾ ಉಸಿರಾಟದ ಸಮಸ್ಯೆ ಕಂಡುಬಂದರೆ ಸ್ವಯಂ ಔಷಧ ಸೇವಿಸದೆ ಸಮೀಪದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಜ್ವರ ನಿಯಂತ್ರಣ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಪರಿಸ್ಥಿತಿಯ ಮೇಲೆ ಆರೋಗ್ಯ ಇಲಾಖೆ ನಿರಂತರ ನಿಗಾ ವಹಿಸಿದೆ.



